ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತೋಷದಿಂದ ಸರ್ಕಾರ ರಚಿಸುತ್ತೇನೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ವಿಷಕಂಠನಂತೆ ನೋವುಗಳನ್ನು ನುಂಗಿ, ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂಬ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಖ್ಯಮಂತ್ರಿಯಾಗುವ ಕುಮಾರಸ್ವಾಮಿಯವರ ಕನಸು ನನಸಾಗಿದೆ. ಆದರೆ ಮುಖ್ಯಮಂತ್ರಿಯಾಗಿರುವುದು ತಮಗೆ ಸಂತಸ ತಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಬೇಸರ ಹೆಚ್ಚು ದಿನಗಳ ಕಾಲವಿರುವುದಿಲ್ಲ, ಪರಿಸ್ಥಿತಿಗಳು ಶೀಘ್ರದಲ್ಲಿಯೇ ಬದಲಾಗಲಿದೆ. ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಅಮಿತ್ ಶಾ ಸೂಚಿಸಿದ್ದೇ ಆದರೆ, ನಾನು ಸಂತೋಷದಿಂದ ಸರ್ಕಾರ ರಚನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಯಾವುದೇ ಪಕ್ಷಗಳು ಕೈಜೋಡಿಸದೇ ಇರುವುದರಿಂದ ಕಾಂಗ್ರೆಸ್ ಪಕ್ಷ ಇದೀಗ ಹತಾಶೆಗೊಂಡಿದೆ. ಇದೀಗ ಕಾಂಗ್ರೆಸ್ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕರ್ನಾಟಕದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಪರಿಸ್ಥಿತಿಗಳು ಬದಲಾದವು. ತಮಗಾಗುತ್ತಿರುವ ಅವಮಾನದಿಂದಾಗಿ ಕೆಲವೊಮ್ಮೆ ಕಾಂಗ್ರೆಸ್ ನಾಯಕರು ದೇಗುಲಗಳಿಗೆ ಭೇಟಿ ನೀಡಿದರೆ, ಮತ್ತೆ ಕೆಲವೊಮ್ಮೆ ಮುಸ್ಲಿಮರಿಗೆ ಬೆಂಬಲ ನೀಡುತ್ತಿದ್ದಾರೆಂದು ವ್ಯಂಗ್ಯ ಮಾಡಿದ್ದಾರೆ.
Advertisement
ಬೆಂಗಳೂರಿನ ಜೆಡಿಎಸ್ ಭವನದಲ್ಲಿರುವ ಹಮ್ಮಿಕೊಳ್ಳಲಾಗಿದ್ದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ಅಲ್ಲದೇ ರಾಜ್ಯ ಸಮ್ಮಿಶ್ರ ಸರ್ಕಾರ ಮುಖ್ಯ ಮಂತ್ರಿಯಾಗಿರುವುದಕ್ಕೆ ಕಾರ್ಯಕರ್ತರಿಗೆ ಸಂತೋಷವಾಗಿದೆ. ಆದರೆ, ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗುತ್ತಿರುವ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆಂದು ಕುಮಾರಸ್ವಾಮಿಯವರು ಹೇಳಿದ್ದರು.