ಬೆಂಗಳೂರು/ಉಡುಪಿ: ಮಂಗನ ಕಾಯಿಲೆಗೆ (KFD) ಹೊಸ ವ್ಯಾಕ್ಸಿನ್ ಕುರಿತು ಐಸಿಎಂಆರ್ (ICMR) ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ (Vaccine) ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಉಡುಪಿಯಲ್ಲಿ (Udupi) ಇಂದು ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್‌ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮಂಗನ ಕಾಯಿಲೆಗೆ ಎಬಿಎಆರ್‌ಕೆ ಫಂಡ್‌ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆಎಫ್‌ಡಿ ಪಾಸಿಟಿವ್ ಬಂದವರನ್ನು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್
- Advertisement
ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್‌ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 20 ಸಕ್ರಿಯ ಪ್ರಕರಣಗಳು ಇವೆ. ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ
- Advertisement
ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿಕೆ ಕಾರ್ಯಕ್ರಮ ಕೈಗೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ ಎಂದು ಸೂಚಿಸಲಾಗಿದೆ. ಹೊಸ ವ್ಯಾಕ್ಸಿನ್ ಬಗ್ಗೆ ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದೆ. ಐಸಿಎಂಆರ್‌ನವರು ವ್ಯಾಕ್ಸಿನ್ ತಯಾರಿಕೆಗೆ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ
ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ ಡಿಇಪಿಎ ತೈಲವನ್ನು ಸಾರ್ವಜನಿಕರಿಗೆ ಬಳಸಲು ಉಚಿತವಾಗಿ ನೀಡಲಾಗಿದೆ. ರಾಜ್ಯಮಟ್ಟದಿಂದ ಈವರೆಗೆ 62794 ಡಿಇಪಿಎ ಬಾಟಲ್‌ಗಳನ್ನು ವಿತರಿಲಾಗಿದೆ. ರಾಜ್ಯ ಮಟ್ಟದಿಂದ ಅಧಿಕಾರಿಗಳು, ಆರ್‌ಆರ್‌ಟಿ ನಿಯಮಿತವಾಗಿ ಭೇಟಿ ನೀಡುತ್ತಿದ್ದು ಸಮಯೋಚಿತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪ್ರತಿ ದಿನ ವಿ.ಸಿ. ಮುಖೇನ ಸದರಿ ಕಾರ್ಯ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದೆ. ವಿಡಿಎಲ್ ಶಿವಮೊಗ್ಗ ಮತ್ತು ಎಮ್‌ಐವಿ ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು ಕೆಎಫ್‌ಡಿ ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ. ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಮತ್ತು ಅಗತ್ಯವಿದ್ದರೆ, ಉನ್ನತ ರೆಫರಲ್ ಸೆಂಟರ್ ಸಾಗಿಸಲು ಉಚಿತ ಅಂಬುಲೆನ್ಸ್ ಸೌಲಭ್ಯ ಒದಗಿಸಿದೆ. ರೋಗ ಪ್ರಸರಣಾ ಋತುವಿನಲ್ಲಿ ತಾಲೂಕು ಆಸ್ಪತ್ರೆಗಳಾದ ಜಿಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್‌ಡಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಐಸಿಯುನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿಗತಿಯನ್ನು ಪ್ರತಿದಿನ ಪರೀಶೀಲಿಸಲು ಟೆಲಿ-ಐಸಿಯುಸೇವೆಯನ್ನು ಕೆಎಫ್‌ಡಿಗೂ ವಿಸ್ತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಗುಂಡೂರಾವ್ ವಿವರಿಸಿದರು. ಇದನ್ನೂ ಓದಿ: ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ: ಅಮಿತ್ ಶಾ