ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಸೆಮಿಪೈನಲ್‍ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ವಿರೋಚಿತ ಹೋರಾಟದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತು. ಈ ಸೋಲಿನ ಆಘಾತದಿಂದ ಪತಿ ಹೊರ ಬಂದಿಲ್ಲ ಎಂದು ಜಡೇಜಾ ಪತ್ನಿ ರಿವಾಬಾ ಹೇಳಿದ್ದಾರೆ.
ಸೋಲಿನ ವಿಚಾರವಾಗಿ ಮಾತನಾಡಿದ ರವೀಂದ್ರ ಜಡೇಜಾ, ನಾನು ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರಬರದಿದ್ದರೆ ಗೆಲುವು ಸಾಧಿಸುತ್ತಿದ್ದೇವು. ಇನ್ನೇನು ಗೆಲುವು ಸಾಧಿಸುತ್ತೇವೆ ಎನ್ನುವ ಹಂತದಲ್ಲಿಯೇ ಸೋಲನುಭವಿಸಿದೇವು ಎಂದು ಹೇಳುತ್ತಲೇ ಇದ್ದರು. ಈ ಆಘಾತದಿಂದ ಅವರು ಇನ್ನೂ ಹೊರ ಬಂದಿಲ್ಲ. ಹೀಗಾಗಿ ಅವರಿಗೆ ಸಾಂತ್ವನ ಹೇಳಲು ನಮ್ಮಿಂದಾಗುತ್ತಿಲ್ಲ ಎಂದು ರಿವಾಬಾ ಜಡೇಜಾ ತಿಳಿಸಿದ್ದಾರೆ.
ಪತಿ ಯಾವಾಗಲೂ ಸ್ಫೂರ್ತಿಯಿಂದ ಆಟವಾಗುತ್ತಾರೆ. ನೀವು ಅದನ್ನು ನೋಡಿರಬಹುದು. ಪಂದ್ಯಗಳಲ್ಲಿ ಆಲ್ ರೌಂಡರ್ ಆಗಿ ಮಿಂಚುತ್ತಾರೆ. 2013ರಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲುವು ಸಾಧಿಸಿದಾಗ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು ಎಂದು ರಿಬಾವಾ ಜಡೇಜಾ ನೆನೆದರು.
ಈ ಹಿಂದೆ ಭಾವನತ್ಮಾಕವಾಗಿ ಟ್ವೀಟ್ ಮಾಡಿದ್ದ ರವೀಂದ್ರ ಜಡೇಜಾ, “ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ. ಅದನ್ನು ನಾನು ಎಂದಿಗೂ ಬಿಡುವುದಿಲ್ಲ. ನನ್ನ ಪ್ರೀತಿಯ ಮೂಲವಾದ ನನ್ನ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನನಗೆ ಸದಾ ಸ್ಫೂರ್ತಿದಾಯಕವಾಗಿರಿ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ” ಎಂದು ಬರೆದುಕೊಂಡಿದ್ದರೆ.
ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು. ಜಡೇಜಾ 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿತ್ತು. ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದ್ದರು.