ನವದೆಹಲಿ: ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ನೋಡಿ ಬ್ಯಾಟಿಂಗ್ ಮಾಡುವುದನ್ನು ಕಲಿಯುತ್ತಿದ್ದೇನೆ ಎಂದು ಪಾಕಿಸ್ತಾನದ ಯುವ ಆರಂಭಿಕ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.
ವಿಶ್ವಕಪ್‍ನಲ್ಲಿ ಪಾಕಿಸ್ತಾನ ಗೆದ್ದ ಏಕೈಕ ಪಂದ್ಯದಲ್ಲಿ 24 ವರ್ಷದ ಬಾಬರ್ ಅಜಮ್ ಅವರು ಸ್ಫೋಟಕ 63 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಆಟಗಾರ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಈ ರೀತಿ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಬಾಬರ್ ಅಜಮ್ ಅವರು ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರ. ಅದಕ್ಕಾಗಿಯೇ ಇವರನ್ನು ಕೊಹ್ಲಿಗೆ ಹೋಲಿಸಲಾಗುತ್ತಿದೆ. ಈಗ ಅವರೇ “ಕೊಹ್ಲಿ ಅವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುತ್ತಾರೆ. ನಾನು ಅವರು ಬ್ಯಾಟಿಂಗ್ ಮಾಡುವುದನ್ನು ನೋಡುತ್ತೇನೆ ಮತ್ತು ನಾನು ಅವರು ರೀತಿ ಬ್ಯಾಟ್ ಮಾಡಲು ಕಲಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಬಹುತೇಕ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ನಾನು ಕೂಡ ಇದೇ ರೀತಿ ಆಡಲು ಪ್ರಯತ್ನಿಸುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ನಾವು ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಪೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾವು ಆ ಗೆಲುವಿನ ಸ್ಫೂರ್ತಿ ಪಡೆದು ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ನಡುವಿನ ವಿಶ್ವಕಪ್ ಪಂದ್ಯ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿದೆ.