ಅಬುಧಾಬಿ: 2024ರ ಮಹಿಳಾ ಟಿ20 ವಿಶ್ವಕಪ್‌ನ (Womens T20 World Cup) ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ಮಹಿಳಾ ತಂಡ (New Zealand Womens Team) ಭಾರತ ಮಹಿಳಾ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಸೋಫಿ ಡಿವೈನ್ ಸ್ಫೋಟಕ ಅರ್ಧಶತಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮಹಿಳಾ ತಂಡದ ವಿರುದ್ಧ ಕಿವೀಸ್ ಗೆಲುವಿನ ನಗೆ ಬೀರಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಮಹಿಳಾ ತಂಡ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. 161 ರನ್‌ಗಳ ಸವಾಲಿನ ಗುರಿ ಪಡೆದ ಭಾರತ ಮಹಿಳಾ ತಂಡ (India Womens Team) 19 ಓವರ್‌ಗಳಲ್ಲೇ 102 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
Advertisement
ಗೆಲುವಿನ ವಿಶ್ವಾಸದೊಂದಿಗೆ ಸವಾಲಿನ ಗುರಿ ಬೆನ್ನತ್ತಿದ ಭಾರತದ ವನಿತೆಯರು ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಶುರು ಮಾಡಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಪರಿಣಾಮ ಭಾರತ ಮೊದಲ 10 ಓವರ್‌ಗಳಲ್ಲಿ ಕೇವಲ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳೂ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫರಾದರು. ಇದರ ಪರಿಣಾಮ ಕಿವೀಸ್ ಮೇಲುಗೈ ಸಾಧಿಸಿತು.
Advertisement
ಭಾರತದ ಪರ ಸ್ಮೃತಿ ಮಂಧಾನ 12 ರನ್, ಶಫಾಲಿ ವರ್ಮಾ 2 ರನ್, ಹರ್ಮನ್ ಪ್ರೀತ್‌ಕೌರ್ 15 ರನ್, ಜೆಮಿಮಾ ರೊಡ್ರಿಗ್ಸ್ 13 ರನ್, ರಿಚಾ ಘೋಷ್ 12 ರನ್, ದೀಪ್ತಿ ಶರ್ಮಾ 13 ರನ್‌ಗಳ ಕೊಡುಗೆ ನೀಡಿದರು.
Advertisement
ಕಿವೀಸ್ ಪರ ರೋಸ್ಮರಿ ಮೈರ್ 4 ವಿಕೆಟ್ ಕಿತ್ತರೆ, ಲಿಯಾ ತಾಥುಥು 3 ವಿಕೆಟ್, ಇಡನ್ ಕಾರ್ಸನ್ 2 ವಿಕೆಟ್ ಹಾಗೂ ಅಮೇಲಿಯ ಕೇರ್ 1 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಕ್ರೀಸ್‌ಗಿಳಿದ ಕಿವೀಸ್ ಮಹಿಳಾ ತಂಡದ ಆಟಗಾರ್ತಿಯರು ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಮೊದಲ ವಿಕೆಟ್‌ಗೆ ಸುಜಿ ಬೇಟ್ಸ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ ಜೋಡಿ 46 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟ ನೀಡಿತ್ತು. ಇದರೊಂದಿಗೆ ನಾಯಕಿ ಸೋಫಿ ಡಿವೈನ್ ಅವರ ಸ್ಫೋಟಕ ಅರ್ಧಶತಕ ತಂಡಕ್ಕೆ ಇನ್ನಷ್ಟು ಬಲ ನೀಡಿತು.
ಕಿವೀಸ್ ಪರ ನಾಯಕಿ ಸೋಫಿ ಡಿವೈನ್ ಅಜೇಯ 57 ರನ್ (36 ಎಸೆತ, 7 ಬೌಂಡರಿ), ಸುಜಿ ಬೇಟ್ಸ್ 27 ರನ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ 34 ರನ್, ಅಮೇಲಿಯ ಕೇರ್ 13 ರನ್, ಬ್ರೂಕಿ 16 ರನ್ ಗಳಿಸಿದ್ರೆ, ಮಾಡಿ ಗ್ರೀನ್ 5 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಟೀಂ ಇಂಡಿಯಾ ಪರ ವೇಗಿ ರೇಣುಕಾ ಸಿಂಗ್ 2 ವಿಕೆಟ್ ಕಿತ್ತರೆ, ಅರುಂಧತಿ ರೆಡ್ಡಿ, ಆಶಾ ಶೋಭಾನಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.