Connect with us

Cricket

ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

Published

on

ದುಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ವೈಟ್‍ವಾಶ್ ಕಂಡರೂ ಭಾರತ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದೆ.

ತಾಯ್ನಾಡಿನಲ್ಲಿ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಚಳಿ ಬಿಡಿಸಿದ ವಿರಾಟ್

ಭಾರತದ ವಿರುದ್ಧ ಗೆದ್ದು ಬೀಗಿರುವ ನ್ಯೂಜಿಲೆಂಡ್ ತಂಡವು ಟೆಸ್ಟ್ ಶ್ರೇಯಾಂಕದಲ್ಲಿ ಎರಡು ಸ್ಥಾನ ನೆಗೆತ ಕಂಡಿದೆ. ಟೀಂ ಇಂಡಿಯಾ 116 ಅಂಕ ಪಡೆದಿದ್ದರೆ, ಕಿವೀಸ್ 110 ಅಂಕ ಗಳಿಸಿದೆ. 108 ಅಂಕಗಳಿಂದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ – ಭಾರತಕ್ಕೆ ಹೀನಾಯ ಸೋಲು

2019ರ ಡಿಸೆಂಬರ್- 2020ರ ಜನವರಿಯಲ್ಲಿ ಆಸ್ಟ್ರೇಲಿಯಾ ತಂಡವು 3-0 ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತ್ತು. ಇದರಿಂದಾಗಿ ಕಿವೀಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಈಗ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ. ಇದೇ ಸಮಯದಲ್ಲಿ ಇಂಗ್ಲೆಂಡ್ 105 ಅಂಕಗಳಿಂದ ನಾಲ್ಕನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾ 98 ಅಂಕಗಳಿಂದ ಐದನೇ ಸ್ಥಾನದಲ್ಲಿವೆ.

ಟೆಸ್ಟ್ ಚಾಂಪಿಯನ್‍ಶಿಪ್:
2019-21ರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2019ರಿಂದ ಒಟ್ಟು ನಾಲ್ಕು ಸರಣಿಯ 9 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದೆ. ಈ ಪೈಕಿ 7 ಪಂದ್ಯ ಗೆದ್ದಿದ್ದು, 2ರಲ್ಲಿ ಸೋಲು ಕಂಡು 3 ಸರಣಿಯನ್ನು ಗೆದ್ದು ಬೀಗಿದೆ. ಈ ಮೂಲಕ ಭಾರತವು 360 ಪಾಯಿಂಟ್ಸ್ ಗಳಿಸಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಇದುವರೆಗೂ 3 ಸರಣಿಯಲ್ಲಿ 10 ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಗೆದ್ದರೆ, ಎರಡರಲ್ಲಿ ಸೋಲು ಕಂಡು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು ಎರಡು ಸರಣಿ ಗೆದ್ದಿರುವ ಆಸೀಸ್ ಪಡೆ 296 ಪಾಯಿಂಟ್ಸ್ ಗಳಿಸಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 3 ಸರಣಿಯಲ್ಲಿ 7 ಪಂದ್ಯ ಆಡಿದ್ದು, ಮೂರು ಪಂದ್ಯ ಗೆದ್ದು ಬೀಗಿದರೆ, 4ರಲ್ಲಿ ಸೋಲು ಕಂಡಿದೆ. ಒಂದು ಸರಣಿಯನ್ನು ತನ್ನ ಕೈವಶ ಮಾಡಿಕೊಂಡ ಕಿವೀಸ್ 180 ಪಾಯಿಂಟ್ಸ್ ಗಳಿಸಿದೆ. ಉಳಿದಂತೆ ಇಂಗ್ಲೆಂಡ್ 146 ಪಾಯಿಂಟ್ಸ್ ಗಳಿಂದ 4ನೇ ಸ್ಥಾನ, 140 ಪಾಯಿಂಟ್ಸ್ ಗಳಿಸಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.

Click to comment

Leave a Reply

Your email address will not be published. Required fields are marked *