ಬೆಂಗಳೂರು: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಆರಂಭಗೊಂಡಿದ್ದು, ಈ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ 60 ಅಂಕ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡಿಗೆ 24 ಅಂಕ ನೀಡಿದ್ದು ಸರಿಯೇ? ಇಂಗ್ಲೆಂಡಿಗೆ ಯಾಕೆ 60 ಅಂಕ ನೀಡಿಲ್ಲ ಎಂದು ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಆದರೆ ಈ ಅಂಕದಲ್ಲಿ ಯಾವುದೇ ಮೋಸ ನಡೆದಿಲ್ಲ. ಐಸಿಸಿ ನಿಯಮದ ಪ್ರಕಾರವೇ ಎಲ್ಲ ತಂಡಗಳಿಗೆ ಅಂಕವನ್ನು ಹಂಚಿಕೆ ಮಾಡಲಾಗುತ್ತಿದೆ.
ಅಂಕ ಹೇಗೆ ಹಂಚಲಾಗುತ್ತದೆ?
ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ವಿಂಡೀಸ್ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ. ಅದೇ 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 24 ಅಂಕಗಳನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಂದೊಂದು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ 24 ಅಂಕಗಳನ್ನು ನೀಡಲಾಗಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳಿಗೆ 8 ಅಂಕಗಳನ್ನು ನೀಡಲಾಗಿದೆ.
Advertisement
Advertisement
2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.
Advertisement
ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿದೆ.
Advertisement
ಭಾರತಕ್ಕೆ ಮೊದಲ ಸ್ಥಾನ:
ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಪಟ್ಟಿಯಲ್ಲಿ ಭಾರತ ಈಗ 60 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು 60 ಅಂಕಗಳು ಗಳಿಸಿದರೂ ಅನುಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದಿದೆ. ಭಾರತ 318 ರನ್‍ಗಳ ಭಾರೀ ಅಂತರದಿಂದ ಗೆದ್ದ ಹಿನ್ನೆಲೆಯಲ್ಲಿ 2.338 ರನ್ಸ್ ಪರ್ ವಿಕೆಟ್ ಅನುಪಾತ ಇರುವ ಕಾರಣ ಮೊದಲ ಸ್ಥಾನವನ್ನು ಪಡೆದಿದೆ.
ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 100 ರನ್ ಗಳಿಗೆ ಆಲೌಟ್ ಆಗಿತ್ತು.
((297+343)/17)÷(222+100)/20)
=(640/17)÷ (322/20)
=37.647 ÷ 16.1
=2.338