ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ T20 ವಿಶ್ವಕಪ್ (T 20 World Cup) ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಪ್ರಸ್ತುತ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿದೆ. ಈ ಬಾರಿಯ ವಿಶ್ವಕಪ್ ವೇಳೆ ಐಸಿಸಿ ಮಾಡಿರುವ ಘೋಷಣೆಯು ಇದೀಗ ತಂಡಗಳ ಸಂತಸವನ್ನು ಇಮ್ಮಡಿಗೊಳಿಸಿದೆ.
ಹೌದು. ಐಸಿಸಿ ಟೂರ್ನಿಯ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಹುಮಾನದ ಮೊತ್ತವು ಇಲ್ಲಿಯವರೆಗಿನ ಅತ್ಯಧಿಕ ಬಹುಮಾನವಾಗಿದೆ. T-20 ವಿಶ್ವಕಪ್‌ಗಾಗಿ ICC ಸುಮಾರು ರೂ 93 ಕೋಟಿ 51 ಲಕ್ಷ (11.25 ಮಿಲಿಯನ್ ಡಾಲರ್ ) ದಾಖಲೆಯ ಬಹುಮಾನವನ್ನು ಘೋಷಿಸಿದೆ. ಇದರಲ್ಲಿ ವಿಜೇತ ತಂಡಕ್ಕೆ ಸುಮಾರು 20.36 ಕೋಟಿ ($ 2.45 ಮಿಲಿಯನ್) ಹಾಗೂ ರನ್ನರ್ ಅಪ್ ಗೆ ಸುಮಾರು 10.63 ಕೋಟಿ ರೂ.(1.28 ಮಿಲಿಯನ್ ಡಾಲರ್) ಸಿಗಲಿದೆ.
ಸೆಮಿಫೈನಲ್‌ಗೆ ತಲುಪುವ ಉಳಿದ ಎರಡು ತಂಡಗಳಿಗೆ 6.54 ಕೋಟಿ ರೂ. (787,500 ಡಾಲರ್) ಮೊತ್ತವನ್ನು ನೀಡಲಾಗುತ್ತದೆ. ಈ ಬಾರಿ T20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡಕ್ಕೂ ಐಸಿಸಿ ಒಂದಷ್ಟು ಮೊತ್ತವನ್ನು ನೀಡಲಿದೆ. ಸೂಪರ್-8 (ಎರಡನೇ ಸುತ್ತು) ಹಂತದಲ್ಲಿ ಸೋಲುವ ಪ್ರತಿಯೊಂದು ತಂಡಗಳು ಅಂದಾಜು ರೂ.3.17 ಕೋಟಿ (382,500 ಡಾಲರ್) ಪಡೆಯುತ್ತವೆ.
ಈ ಬಾರಿ ಟಿ20 ವಿಶ್ವಕಪ್ ಪಂದ್ಯಗಳು 9 ಮೈದಾನಗಳಲ್ಲಿ ನಡೆಯುತ್ತಿವೆ. ಇವುಗಳಲ್ಲಿ 6 ವೆಸ್ಟ್ ಇಂಡೀಸ್ ಮತ್ತು 3 ಅಮೆರಿಕದಲ್ಲಿವೆ. ಟೆಕ್ಸಾಸ್, ಗಯಾನಾ, ಬಾರ್ಬಡೋಸ್, ನ್ಯೂಯಾರ್ಕ್, ಆ್ಯಂಟಿಗಾ, ಫ್ಲೋರಿಡಾ, ಟ್ರಿನಿಡಾಡ್, ಕಿಂಗ್ಸ್‌ಟೌನ್ ಹಾಗೂ ಸೇಂಟ್ ಲೂಸಿಯಾದಲ್ಲಿ ಪಂದ್ಯಗಳು ನಡೆಯುತ್ತವೆ. ಇದನ್ನೂ ಓದಿ: ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ
ಕಳೆದ ಬಾರಿ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಡಾಲರ್ ಆಗಿತ್ತು, ಅದರಲ್ಲಿ ವಿಜೇತ ಇಂಗ್ಲೆಂಡ್ 1.6 ಮಿಲಿಯನ್ ಡಾಲರ್ ಪಡೆದಿತ್ತು. ವಿಶ್ವಕಪ್‌ನ ಒಂಬತ್ತನೇ ಆವೃತ್ತಿಯಲ್ಲಿ 20 ತಂಡಗಳ ಪಂದ್ಯಾವಳಿಯ ವಿಜೇತರಿಗೆ ನೀಡಲಾದ ಬಹುಮಾನ ಮೊತ್ತವು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿದೆ ಎಂದು ಐಸಿಸಿ ಹೇಳಿದೆ. ಇದಲ್ಲದೇ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ನಂತರ ಟ್ರೋಫಿಯನ್ನು ಸಹ ನೀಡಲಾಗುವುದು ಎಂದಿದೆ.