ಕ್ರಿಕೆಟ್ (Cricket) ತನ್ನ ನಿಯಮಗಳಿಂದಲೇ ಜಗತ್ತಿನ ಕ್ರೀಡಾಸಕ್ತರ ಮನಗೆದ್ದಿದೆ. ಕೆಲವೊಮ್ಮೆ ಚರ್ಚೆಯನ್ನೂ ಹುಟ್ಟುಹಾಕಿದೆ. ನಿಗದಿತ ಅವಧಿಯಲ್ಲಿ ಆಟಗಾರನೊಬ್ಬ ಕ್ರೀಸ್‌ಗೆ ಆಗಮಿಸದಿದ್ದರೆ ಏನಾಗುತ್ತೆ ಎಂಬುದಕ್ಕೆ ಈ ವಿಶ್ವಕಪ್‌ನ ಏಂಜೆಲೊ ಮ್ಯಾಥ್ಯೂಸ್ ಪ್ರಕರಣ ಉತ್ತಮ ನಿದರ್ಶನ. ಹಾಗೆಯೇ ಬೌಲರ್ ನಿಗದಿತ ಅವಧಿಯಲ್ಲಿ ಬೌಲಿಂಗ್ ಆರಂಭಿಸದಿದ್ದರೆ ಏನಾಗಲಿದೆ? ಈ ಪ್ರಶ್ನೆಗೆ ಉತ್ತರವೆಂಬಂತೆ ಐಸಿಸಿ ನೂತನ ನಿಯಮವೊಂದನ್ನು ಜಾರಿಗೆ ತಂದಿದೆ.
ಯಾವುದೇ ಕ್ರೀಡೆಗೆ ಸಮಯ ಪರಿಪಾಲನೆ ತುಂಬಾ ಮುಖ್ಯ. ಸಮಯದ ವಿಚಾರದಲ್ಲಿ ಯಾಮಾರಿದರೆ ಕೆಲ ನಿಯಮಗಳು ಆಟವನ್ನೂ, ಆಟಗಾರರನ್ನೂ ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿಗದಿತ ಸಮಯಕ್ಕೆ ಕ್ರೀಸ್‌ಗೆ ಬರದೇ ಒಂದು ಬಾಲ್ ಕೂಡ ಆಡದ ಬ್ಯಾಟರ್ ‘ಟೈಮ್ಡ್ ಔಟ್’ ನಿಯಮದಿಂದಾಗಿ ಔಟಾಗಿ ಹೊರನಡೆದ. ಇದನ್ನ ಈಗ ಬೌಲಿಂಗ್‌ಗೂ ಅನ್ವಯಿಸಿದೆ ಐಸಿಸಿ. ಈ ತಲೆನೋವು ಬ್ಯಾಟರ್‌ಗಳಿಗಷ್ಟೇ ಎನ್ನಲಾಗುತ್ತಿತ್ತು. ಆದರೆ ಬೌಲರ್‌ಗಳಿಗೂ ಐಸಿಸಿ (ICC) ಶಾಕ್ ಕೊಟ್ಟಿದೆ. ಬೌಲರ್ ನಿಗದಿತ ಅವಧಿಯಲ್ಲಿ ಬೌಲಿಂಗ್ ಆರಂಭಿಸದಿದ್ದರೆ ‘ಸ್ಟಾಪ್ ಕ್ಲಾಕ್’ ನಿಯಮವನ್ನ ಎದುರಿಸಬೇಕಾಗುತ್ತೆ. ಇದನ್ನೂ ಓದಿ: ಔಟ್ ಮಾಡುವ ಭರದಲ್ಲಿ ಇಶಾನ್ ಕಿಶನ್ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?
Advertisement
Advertisement
ಅಹಮದಾಬಾದ್‌ನಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕರ ಸಭೆಯಲ್ಲಿ ಈ ರೂಲ್ಸ್ ಜಾರಿಗೆ ನಿರ್ಧರಿಸಲಾಯಿತು. ಏನಿದು ಸ್ಟಾಪ್ ಕ್ಲಾಕ್ ನಿಯಮ? ಇದರ ಜಾರಿ ಯಾಕೆ? ಬೌಲರ್ ನಿಯಮ ಮೀರಿದ್ರೆ ಶಿಕ್ಷೆಯೇನು? ಇದರಿಂದ ಶಿಕ್ಷೆಗೊಳಗಾದ ತಂಡ ಎದುರಿಸಬಹುದಾದ ಸವಾಲೇನು? ಎಂಬ ಬಗ್ಗೆ ವಿಸ್ತೃತವಾಗಿ ಇಲ್ಲಿ ಚರ್ಚಿಸಲಾಗಿದೆ.
Advertisement
ಸ್ಟಾಪ್ ಕ್ಲಾಕ್ ನಿಯಮ
ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ (5 Run Penalty) ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ. ಆದರೆ ಮೂರನೇ ಬಾರಿಯೂ ಹಾಗೆಯೇ ವಿಳಂಬ ಮಾಡಿದರೆ ಸ್ಟಾಪ್ ಕ್ಲಾಕ್ (Stop Clock) ನಿಯಮ ಅನ್ವಯವಾಗಲಿದೆ. ಕ್ರಿಕೆಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ತಡೆಯಲು ಐಸಿಸಿ ಈ ಹೊಸ ಯೋಜನೆ ಪರಿಚಯಿಸಲು ನಿಧರಿಸಿದೆ. 2023ರ ಡಿಸೆಂಬರ್‌ನಿಂದ 2024ರ ಏಪ್ರಿಲ್ ವರೆಗೆ ಏಕದಿನ ಹಾಗೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಈ ನಿಯಮ ಬಳಕೆಯಾಗಲಿದೆ. ಇದನ್ನೂ ಓದಿ: ಟೀಂ ಇಂಡಿಯಾದ ಕೋಚ್ ಆಗಿ ಮುಂದುವರಿಯಲಿದ್ದಾರೆ ದ್ರಾವಿಡ್
Advertisement
ಹೊಸ ರೂಲ್ಸ್ ಏಕೆ?
ಅಂತಾರಾಷ್ಟ್ರೀಯ ಪಂದ್ಯಗಳು ಸಮಯಕ್ಕೆ ಮುಕ್ತಾಯವಾಗುತ್ತಿಲ್ಲ. ಓವರ್‌ಗಳ ಮಧ್ಯೆ ತಂಡಗಳು ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿವೆ. ಇದನ್ನು ನಿಯಂತ್ರಿಸಲು ಸ್ಟಾಪ್ ಕ್ಲಾಕ್‌ಗಳ ಬಳಕೆ ಮಾಡಲಾಗುತ್ತದೆ ಎಂದು ಐಸಿಸಿ ಹೇಳಿದೆ. ಟೆನಿಸ್ ಆಟದಲ್ಲೂ ಈ ನಿಯಮ ಬಳಸಲಾಗುತ್ತದೆ. ಪ್ರಸ್ತುತ ನಿಧಾನಗತಿಯ ಬೌಲಿಂಗ್‌ಗೆ ತಂಡದ ನಾಯಕ ಅಥವಾ ಇಡೀ ಟೀಂಗೆ ಪಂದ್ಯದ ಸಂಭಾವನೆಯಲ್ಲಿ ಇಂತಿಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ಸಮಯದೊಳಗೆ ಓವರ್ ಮುಗಿಸದಿದ್ದರೆ 30 ಯಾರ್ಡ್ ವೃತ್ತದೊಳಗೆ ಒಬ್ಬ ಕ್ಷೇತ್ರರಕ್ಷಕ ಹೆಚ್ಚುವರಿಯಾಗಿ ಇರಬೇಕು ಎಂಬ ನಿಯಮವನ್ನು ಐಸಿಸಿ ಜಾರಿ ಮಾಡಿತ್ತು. ಆದರೂ ತಂಡಗಳು ಓವರ್-ರೇಟ್‌ನಲ್ಲಿ ಹಿಂದೆ ಬಿದ್ದಿರುವ ಕಾರಣ ರನ್ ಪೆನಾಲ್ಟಿ ಹಾಕಲು ನಿರ್ಧರಿಸಲಾಗಿದೆ.
ಐಸಿಸಿ ಇತರೆ ಕಠಿಣ ನಿಯಮಗಳು
ಏಕದಿನ ವಿಶ್ವಕಪ್ ನಡುವೆಯೇ ಐಸಿಸಿ ಸದಸ್ಯತ್ವ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮತ್ತೊಂದು ಬಿಗ್ ಶಾಕ್ ನೀಡಲಾಗಿತ್ತು. ಇದೇ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್ ನಡೆಸಲು ತಯಾರಿ ಮಾಡಿಕೊಂಡಿದ್ದ ಶ್ರೀಲಂಕಾ ಮಂಡಳಿಗೆ ಈ ಅವಕಾಶ ಕೈತಪ್ಪಿದೆ. ಅಂಡರ್-19 ವಿಶ್ವಕಪ್ (2024) ಆತಿಥ್ಯವನ್ನು ಲಂಕಾ ಮಂಡಳಿ ಕೈಯಿಂದ ಕಸಿದುಕೊಂಡು ಐಸಿಸಿ ದಕ್ಷಿಣ ಆಫ್ರಿಕಾಗೆ ನೀಡಿದೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ 21 ರನ್ ಚೇಸ್; ದಾಖಲೆ ಬರೆದ ಆಸೀಸ್
ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತಿತರಾದವರು ಅಂತಾರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಡುವಂತಿಲ್ಲ ಎಂದು ಐಸಿಸಿ ಈಚೆಗೆ ಪ್ರಮುಖ ನಿರ್ಧಾರವೊಂದನ್ನು ಪ್ರಕಟಿಸಿತು. ಅಂತಾರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಟಗಾರ್ತಿಯರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸಲಾಗುವುದು. ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಕೂಡ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಬದಲಾದ ಆಥ್ಲೀಟ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದೆ. ಕ್ರಿಕೆಟ್ ಸಹ ಒಲಿಂಪಿಕ್ ಕ್ರೀಡೆಯಾಗಲಿರುವ ಕಾರಣ, ಅದೂ ಕೂಡ ಒಲಿಂಪಿಕ್ ನಿಯಮಾವಳಿಗಳ ಅಧೀನಕ್ಕೆ ಬರಲಿದೆ.
5 ರನ್ ಸಿಗುವುದೆಲ್ಲಿ?
ಬೌಲಿಂಗ್ ವೇಳೆ ವೈಡ್ ಆಗಿ ಬಾಲ್ ಬೌಂಡರಿ ಲೈನ್ ಸೇರಿದಾಗ, ನೋ-ಬಾಲ್ ಆಗಿ ಬ್ಯಾಟರ್ ಫೋರ್ ಬಾರಿಸಿದಾಗ ಒಮ್ಮೆಲೆ ಐದು ರನ್ ಬರುತ್ತೆ. ಬಾಲ್ ಕೌಂಟ್ ಆಗದೇ ಐದು ರನ್ ಸಿಗುವುದು ಈ ಸಂದರ್ಭಗಳಲ್ಲಿ ಮಾತ್ರ. ಈ ಸಾಲಿಗೆ ಸ್ಟಾಪ್ ಕ್ಲಾಕ್ ನಿಯಮದಿಂದ ದೊರಯಬಹುದಾದ ರನ್ ಕೂಡ ಸೇರಿದಂತಾಗಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 23 ರನ್, ಮ್ಯಾಕ್ಸಿ ಸ್ಫೋಟಕ ಶತಕ – ರನ್ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ
5 ರನ್ ಪೆನಾಲ್ಟಿ ಸಿಗುವ ಇತರೆ ನಿಯಮಗಳು
ಹಿಂದಿನ ಮಹಿಳಾ ಬಿಗ್ ಬ್ಯಾಷ್ ಲೀಗ್ 2023 ರ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ವಿರುದ್ಧ ಸಿಡ್ನಿ ಸಿಕ್ಸರ್ಸ್ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ಆಟದ ಮಧ್ಯೆ ಸಿಡ್ನಿ ಆಟಗಾರ್ತಿ ಹೊಡೆದ ಬಾಲನ್ನು ಫೀಲ್ಡರ್ ಹಿಡಿದು ಬೌಲರ್ ಕಡೆಗೆ ಎಸೆಯುತ್ತಾರೆ. ಆದರೆ ಬೌಲರ್ ಆ ಬಾಲನ್ನು ತಮ್ಮಲ್ಲಿದ್ದ ಕರವಸ್ತ್ರ ಬಳಸಿ ಹಿಡಿಯುತ್ತಾರೆ. ಆಗ 5 ರನ್ ಪೆನಾಲ್ಟಿಹಾಕಲಾಗುತ್ತದೆ. ಇದರಿಂದ ಬ್ಯಾಟರ್ ತಂಡಕ್ಕೆ ಸುಲಭವಾಗಿ 5 ರನ್ ಒಲಿದು ಬರುತ್ತದೆ. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ನಿಯಮಗಳ ಪ್ರಕಾರ, ವಿಕೆಟ್ ಕೀಪರ್ ಹೊರತುಪಡಿಸಿ ಯಾವುದೇ ಫೀಲ್ಡರ್ ಗ್ಲೌಸ್ ಅಥವಾ ಬಾಹ್ಯ ಲೆಗ್ ಗಾರ್ಡ್ಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಕೈ ಅಥವಾ ಬೆರಳುಗಳಿಗೆ ರಕ್ಷಣೆಯನ್ನು ಅಂಪೈರ್‌ಗಳ ಒಪ್ಪಿಗೆಯೊಂದಿಗೆ ಮಾತ್ರ ಧರಿಸಬಹುದು ಎಂದಿದೆ.
ಈಚೆಗೆ ಶ್ರೀಲಂಕಾ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್‌ಗೆ ಐದು ರನ್ ಪೆನಾಲ್ಟಿ ನೀಡಲಾಯಿತು. ಚಾಮಿಕಾ ಕರುಣಾರತ್ನೆ ಅವರ ಆಫ್-ಪೇಸ್ ಎಸೆತವು ಬ್ಯಾಟರ್ ಹೊಡೆತದಿಂದ ತಪ್ಪಿಸಿಕೊಂಡು, ವಿಕೆಟ್‌ಕೀಪರ್ ಕುಸಾಲ್ ಮೆಂಡಿಸ್ ಅವರ ಹಿಂದೆ ಇಟ್ಟಿದ್ದ ಹೆಲ್ಮೆಟ್‌ಗೆ ತಾಗಿತು. ಇದರಿಂದ ನೆದರ್ಲೆಂಡ್ಸ್‌ಗೆ ಐದು ರನ್ ಸುಲಭವಾಗಿ ಒಲಿದುಬಂತು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್
ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಒಂದು ರನ್ ಅಥವಾ ಒಂದು ಬಾಲ್ ಇಡೀ ಆಟದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಅಂತಹ ಸಂದಿಗ್ಧ ಸಂದರ್ಭದಲ್ಲಿ ಆಟಗಾರರು ತುಂಬಾ ಶ್ರಮ ಹಾಕಬೇಕಾಗುತ್ತದೆ. ಆದರೆ ಕೆಲ ಕಠಿಣ ನಿಯಮಗಳಿಂದ ಎಷ್ಟೋ ಪಂದ್ಯಗಳು ಕೊನೆ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡಿದ್ದುಂಟು.