World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌

Public TV
4 Min Read
Nz vs Aus

ಧರ್ಮಶಾಲಾ: ಕೊನೇ ಕ್ಷಣದವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್‌ (New Zealand) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಟಾಪ್‌-4ರಲ್ಲಿರುವ ಬಲಿಷ್ಠ ತಂಡಗಳ ಕಾದಾಟದಲ್ಲಿ ಆಸೀಸ್‌ಗೆ ಜಯ ಸಿಕ್ಕಿದೆ. ಇನ್ನೂ ವಿಶ್ವಕಪ್‌ ಟೂರ್ನಿಯಲ್ಲೇ ಅತಿಹೆಚ್ಚು ರನ್‌ ಚೇಸ್‌ ಮಾಡಿದ ಖ್ಯಾತಿ ಗಳಿಸಿದರೂ ಕಿವೀಸ್‌ ವಿರೋಚಿತ ಸೋಲನುಭವಿಸಿದೆ.

ಕೊನೆಯ 6 ಎಸೆತಗಳಲ್ಲಿ ಕಿವೀಸ್‌ ಗೆಲುವಿಗೆ 19 ರನ್‌ ಬೇಕಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಕ್ರೀಸ್‌ನಲ್ಲಿದ್ದರು. ಮೊದಲ ಎಸೆತವನ್ನು ಜೇಮ್ಸ್‌ ನೀಶಮ್‌ಗೆ (James Neesham) ಸಿಂಗಲ್ಸ್‌ ತಂದುಕೊಟ್ಟರು. ಆದ್ರೆ 2ನೇ ಎಸೆತದಲ್ಲೇ ಸ್ಟಾರ್ಕ್‌ ವೈಡ್‌ನೊಂದಿಗೆ ಬೌಂಡರಿ ಸೇರಿ 5 ರನ್‌ ಬಿಟ್ಟುಕೊಟ್ಟರು. ಮುಂದಿನ ಮೂರು ಎಸೆತಗಳಲ್ಲೂ ಕಿವೀಸ್‌ ತಂಡಕ್ಕೆ ತಲಾ 2 ರನ್‌ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಜೇಮ್ಸ್‌ ಎರಡು ರನ್‌ ಖದಿಯಲು ಯತ್ನಿಸಿ 1 ರನ್‌ ಕಲೆಹಾಕಿದರು. 2ನೇ ರನ್‌ ಖದಿಯಲು ಯತ್ನಿಸಿದ ಜೇಮ್ಸ್‌ ರನೌಟ್‌ಗೆ ತುತ್ತಾದರು. ಕೊನೆಯ ಎಸೆತದಲ್ಲಿ ಯಾವುದೇ ರನ್‌ ಬಾರದ ಕಾರಣ ಕಿವೀಸ್‌ ವಿರೋಚಿತ ಸೋಲನುಭವಿಸಿತು.

australia 7

ಶನಿವಾರ (ಅಕ್ಟೋಬರ್ 28) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್‌ ಆಯಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 383 ರನ್‌ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು. ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ 345 ರನ್‌ ಚೇಸ್‌ ಮಾಡಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆದ್ರೆ ಕಿವೀಸ್‌ 383 ರನ್‌ವರೆಗೂ ಚೇಸ್‌ ಮಾಡಿದ್ದು, ದಾಖಲೆಯಾಗಿದೆ.

Nz vs Aus 2

ಚೇಸಿಂಗ್‌ ಆರಂಭಿಸಿದ ಕಿವೀಸ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಡೇರಿಲ್ ಮಿಚೆಲ್ (Daryl Mitchell) ಹಾಗೂ ರಚಿನ್‌ ರವೀಂದ್ರ (Rachin Ravindra) ಬ್ಯಾಟಿಂಗ್‌ ನೆರವಿನಿಂದ ಚೇತರಿಸಿಕೊಂಡಿತ್ತು. 3ನೇ ವಿಕೆಟ್‌ಗೆ ಡೇರಿಲ್‌ ಮಿಚೆಲ್‌ ಹಾಗೂ ರವೀಂದ್ರ ಜೋಡಿ 6 ಎಸೆತಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿತ್ತು. ಆ ನಂತರ ಲಾಥಮ್‌ ಹಾಗೂ ರವೀಂದ್ರ ಜೋಡಿ 44 ಎಸೆತಗಳಲ್ಲಿ 54 ರನ್‌, ಫಿಲಿಪ್ಸ್‌ ಹಾಗೂ ರವೀಂದ್ರ ಜೋಡಿ 34 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿದರು. ಒಂದೆಡೆ ರನ್‌ ಕಲೆಹಾಕುತ್ತಿದ್ದ ಕಿವೀಸ್‌ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು, ಇದು ತಂಡದ ಸೋಲಿಗೆ ಕಾರಣವಾಯಿತು.

ಕಿವೀಸ್‌ ಪರ ಡಿವೋನ್‌ ಕಾನ್ವೆ 28 ರನ್‌, ವಿಲ್‌ ಯಂಗ್‌ 32 ರನ್‌ ಗಳಿಸಿದ್ರೆ, ರಚಿನ್‌ ರವೀಂದ್ರ 116 ರನ್‌ (89 ಎಸೆತ, 5 ಸಿಕ್ಸರ್‌, 9 ಬೌಂಡರಿ) ಸಿಡಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್‌ ಒಂದೇ ಟೂರ್ನಿಯಲ್ಲಿ ಕಿವೀಸ್‌ ಪರ ಎರಡು ಶತಕ ಸಿಡಿಸಿದ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಡೇರಿಲ್‌ ಮಿಚೆಲ್‌ 51 ಎಸೆತಗಳಲ್ಲಿ 54 ರನ್‌ (1 ಸಿಕ್ಸರ್‌, 6 ಬೌಂಡರಿ) ಚಚ್ಚಿ ಔಟಾದರು. ಆ ನಂತ್ರ ಟಾಮ್‌ ಲಾಥಮ್‌ 21 ರನ್‌, ಗ್ಲೇನ್‌ ಫಿಲಿಪ್ಸ್‌ 12 ರನ್‌, ಮಿಚೆಲ್‌ ಸ್ಯಾಂಟ್ನರ್‌ 17 ರನ್‌, ಮ್ಯಾಟ್‌ ಹೆನ್ರಿ 9 ರನ್‌ ಗಳಿಸಿದ್ರೆ, ಜೇಮ್ಸ್‌ ನೀಶಮ್‌ 39 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದರೆ, ಟ್ರೆಂಟ್‌ ಬೌಲ್ಟ್‌ 10 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

NZ 1

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ ಪರ ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಮೊದಲ ವಿಕೆಟ್‌ಗೆ 19.1 ಓವರ್‌ಗಳಲ್ಲೇ 175 ರನ್‌ಗಳ ಜೊತೆಯಾಟ ನೀಡಿದರು.

ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಜಿದ್ದಾಜಿದ್ದಿಗೆ ಬಿದ್ದವರಂತೆ ರನ್ ಗಳಿಸಿದರು. ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲೇ 59 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಟ್ರಾವಿಸ್ ಹೆಡ್, ಮೊದಲ ವಿಕೆಟ್‌ಗೆ ಡೇವಿಡ್ ವಾರ್ನರ್ ಜೊತೆಗೂಡಿ 175 ರನ್‌ಗಳ ದಾಖಲೆ ಜೊತೆಯಾಟವನ್ನೂ ಆಡಿದರು. ಮೊದಲ 10 ಓವರ್‌ಗಳಲ್ಲೇ 118 ರನ್ ಕಲೆ ಹಾಕಿದ್ದ ವಾರ್ನರ್- ಹೆಡ್ ಜೋಡಿಯು ವಿಶ್ವದಾಖಲೆ ನಿರ್ಮಿಸಿತು. ವಾರ್ನರ್ ಹಾಗೂ ಹೆಡ್ ಸಿಡಿಲಬ್ಬರದ ಆಟದ ನೆರವಿನಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ 389 ರನ್‌ಗಳ ಕಠಿಣ ಗುರಿ ನೀಡಿತು.

ಒಟ್ಟು 67 ಎಸೆತಗಳನ್ನು ಎದುರಿಸಿದ ಟ್ರಾವಿಸ್‌ ಹೆಡ್‌ 109 ರನ್‌ (7 ಸಿಕ್ಸರ್‌, 10 ಬೌಂಡರಿ) ಗಳಿಸಿದರೆ, ಡೇವಿಡ್‌ ವಾರ್ನರ್‌ 65 ಎಸೆತಗಳಲ್ಲಿ 81 ರನ್‌ (6 ಸಿಕ್ಸರ್‌, 5 ಬೌಂಡರಿ) ಗಳಿಸಿದರು. ನಂತರ ಕಣಕ್ಕಿಳಿದ ಮಿಚೆಲ್‌ ಮಾರ್ಷ್‌ 36 ರನ್‌, ಸ್ಟೀವ್‌ ಸ್ಮಿತ್‌ ಹಾಗೂ ಮಾರ್ನಸ್‌ ಲಾಬುಶೇನ್‌ ತಲಾ 18 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 41 ರನ್‌ (24 ಎಸೆತ, 2 ಸಿಕ್ಸರ್‌, 5 ಬೌಂಡರಿ), ಜಾಸ್‌ ಇಂಗ್ಲಿಸ್‌ 38 ರನ್‌, ಪ್ಯಾಟ್‌ ಕಮ್ಮಿನ್ಸ್‌ 37 ರನ್‌, ಮಿಚೆಲ್‌ ಸ್ಟಾರ್ಕ್‌ ಕೇವಲ ಒಂದು ರನ್‌ ಗಳಿಸಿದ್ರೆ, ಆಡಂ ಝಂಪಾ ಶೂನ್ಯಕ್ಕೆ ನಿರ್ಗಮಿಸಿದರು.

ಕಿವೀಸ್‌ ಪರ ಟ್ರೆಂಟ್‌ ಬೌಲ್ಟ್‌, ಗ್ಲೇನ್‌ ಫಿಲಿಪ್ಸ್‌ ತಲಾ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಯಾಂಟ್ನರ್‌ 2 ವಿಕೆಟ್‌, ಮ್ಯಾಟ್ ಹೆನ್ರಿ ಹಾಗೂ ಜೇಮ್ಸ್‌ ನೀಶಾಮ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

Web Stories

Share This Article