ವಾಷಿಂಗ್ಟನ್: ಟೆಕ್ನಾಲಜಿ ಕಂಪನಿ ಐಬಿಎಂ ರಷ್ಯಾದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆ. ಇದೀಗ ಹೆಚ್ಚುವರಿ ಹಂತವಾಗಿ ಕಂಪನಿ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.
ಐಬಿಎಂ ಸಿಇಒ ಅರವಿಂದ್ ಕೃಷ್ಣ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ರಷ್ಯಾದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಕೊನೆಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್
ಐಬಿಎಂ ಈ ವರ್ಷ ಮಾರ್ಚ್‌ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಅಲ್ಲಿನ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಮುಂದುವರಿಸಿದೆ. ಇದೀಗ ನಾವು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ. ಈ ಮೂಲಕ ನಾವು ಇತರ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು, ರಷ್ಯಾದ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಸ್ಥಗಿತಗೊಳಿಸಬಹುದು ಎಂದು ಅರವಿಂದ್ ಕೃಷ್ಣ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.
ಉಕ್ರೇನ್ ರಷ್ಯಾದ ಯುದ್ಧದ ಪರಿಣಾಮ ಹೆಚ್ಚುತ್ತಿರುವ ಅಭದ್ರತೆಯ ಕಾರಣ ನಮ್ಮ ವ್ಯವಹಾರಗಳನ್ನು ಕ್ರಮಬದ್ಧವಾಗಿ ಕೈಬಿಡುವ ನಿರ್ಧಾರ ಮಾಡಿದ್ದೇವೆ. ರಷ್ಯಾದಲ್ಲಿರುವ ನಮ್ಮ ಸಹೋದ್ಯೋಗಿಗಳು ಹಲವು ತಿಂಗಳುಗಳಿಂದ ಒತ್ತಡ ಹಾಗೂ ಅನಿಶ್ಚಿತತೆಯನ್ನು ಸಹಿಸಿಕೊಂಡಿದ್ದಾರೆ. ಕಂಪನಿಯಿಂದ ವಜಾಗೊಳಿಸುವಲ್ಲಿ ಅವರ ಯಾವುದೇ ತಪ್ಪುಗಳಿಲ್ಲ ಎಂದು ಸಿಇಒ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!
ರಷ್ಯಾದಲ್ಲಿರುವ ನಮ್ಮ ಉದ್ಯೋಗಿಗಳಿಗೆ ಈ ವಿಷಯ ಆಘಾತಕಾರಿಯಾಗಿರುವುದು ನಮಗೆ ತಿಳಿದಿದೆ. ಆದರೆ ಅವರಿಗೆ ಬೆಂಬಲ ನೀಡುವುದನ್ನು ನಾವು ಮುಂದುವರೆಸುತ್ತೇವೆ ಹಾಗೂ ಅವರ ಮುಂದಿನ ವೃತ್ತಿಯ ಬಗ್ಗೆ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.