ಚಿಕ್ಕಬಳ್ಳಾಪುರ: ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂ ಇಲ್ಲದೆ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ನೆಲದ ಮೇಲೆ ಕೂತು ಪಾಠಪ್ರವಚನ ಮಾಡಿ ಮನಸೆಳೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನೂತನ ಸಿಇಓ ಫೌಸಿಯಾ ತಾರನಮ್ ಪಾಠ ಮಾಡಿದ ಮಹಿಳಾ ಐಎಎಸ್ ಅಧಿಕಾರಿ. ಇವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಳೆದ ವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದಾರೆ. ಅಂದಹಾಗೆ ಜಿಲ್ಲೆಗೆ ಆಗಮಿಸಿರುವ ಸಿಇಓ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ಗ್ರಾಮಪಂಚಾಯ್ತಿ ಕಚೇರಿಗಳು ಸೇರಿ ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನ ಸುತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ನಿಗಾವಹಿಸುವ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಅಗಲಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಸಿಇಓ, ಮಕ್ಕಳೊಂದಿಗೆ ಮಕ್ಕಳಂತೆ ನೆಲದ ಮೇಲೆ ಕೂತು ಅವರ ಜೊತೆ ಬೆರೆತು ಪಾಠ ಪ್ರವಚನ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಸಿಇಓ ಫೌಸಿಯಾ ತಾರನಮ್, ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲು ನಾನು ಬಯಸಿದ್ದೇನೆ. ಹೀಗಾಗಿ ನಾನು ಪೂರ್ವ ನಿಗದಿ ಮಾಡದೆ ಧಿಡೀರ್ ಭೇಟಿ ಕೊಟ್ಟಿದ್ದೇನೆ. ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಿಗೆ ಮುಂದಿನ ದಿನಗಳಲ್ಲಿಯೂ ಭೇಟಿ ನೀಡಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.