ಮತ್ತೆ ಕರ್ತವ್ಯಕ್ಕೆ ಹಾಜರ್ – ತಮ್ಮ ಜಯದ ಬಗ್ಗೆ ರೋಹಿಣಿ ಸಿಂಧೂರಿ ಮಾತು

Public TV
1 Min Read
HSN ROHINI

ಹಾಸನ: ಯಾವುದೇ ಸರ್ಕಾರಗಳಿಗೆ 5 ವರ್ಷ ಕಾಲಾವಕಾಶ ಇರುವಂತೆ ಐಎಎಸ್ ಅಧಿಕಾರಿಗಳಿಗೂ ಕನಿಷ್ಟ ಅವಧಿವರೆಗೆ ಒಂದು ಕಡೆ ಕೆಲಸ ಮಾಡಲು ಬಿಡಬೇಕು ಎಂಬ ಸುಪ್ರೀಂಕೋರ್ಟ್ ನಿಯಮಾವಳಿ ಇದೆ. ಆ ಹಿನ್ನೆಲೆಯಲ್ಲಿ ನಾನೂ ಕಾನೂನು ಹೋರಾಟ ಮಾಡಿದೆ. ಇದರಲ್ಲಿ ಜಯ ಸಿಕ್ಕಿರುವುದು ಖುಷಿಯ ವಿಷಯ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಮೂರೂವರೆ ತಿಂಗಳ ಬಳಿಕ ಮತ್ತೆ ಹಾಸನ ಡಿಸಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಒಳ್ಳೆಯ ಬೆಳವಣಿಗೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದರಿಂದ ಒಳ್ಳೆ ಕೆಲಸ ಮಾಡಲು ಕಷ್ಟವಾಗಲಿದೆ. ನಾನು ಹಾಸನ ಜಿಲ್ಲೆಗೆ ಬಂದಾಗ ಏನೂ ಗೊತ್ತಿರಲಿಲ್ಲ. ಕಳೆದ 6 ತಿಂಗಳಲ್ಲಿ ಜಿಲ್ಲೆಯ ಆಗುಹೋಗು ತಿಳಿದುಕೊಂಡಿದ್ದೇನೆ. ಏನೇನು ಕಾರ್ಯಕ್ರಮ ಮಾಡಬಹುದು ಎಂಬ ದೊಡ್ಡ ಪಟ್ಟಿಯೇ ಇದೆ. ಹೀಗಿದ್ದಾಗ ವರ್ಗ ಮಾಡಿದ್ರೆ ಸರಿಕಾಣದು ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗ

ನಾನು ಮಂಡ್ಯದಲ್ಲಿ ಸಿಇಓ ಆಗಿದ್ದಾಗ ಕೇವಲ ಮೂರು ತಿಂಗಳು ಆ ಹುದ್ದೆಯಲ್ಲೇ ಉಳಿಸಿದ್ದರೆ ಬಯಲು ಮುಕ್ತ ಶೌಚಾಲಯ ಯೋಜನೆ ಮುಗಿಸುತ್ತಿದ್ದೆನು. ಅಂದು ವರ್ಗ ಮಾಡಿದಾಗ ಬೇಸರವಾಗಿತ್ತು. ಸುಪ್ರೀಂ ನಿಯಮಾವಳಿ ಇದ್ದರೂ, ಏಕೆ ಪಾಲನೆಮಾಡುತ್ತಿಲ್ಲ ಎಂದು ಈಗ ಕಾನೂನು ಹೋರಾಟ ಮಾಡಬೇಕಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ತಮ್ಮನ್ನು ಮತ್ತೆ ಡಿಸಿಯಾಗಿ ಮುಂದುವರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರಬಹುದು. ಅದು ರಾಜಕೀಯ. ನಾನು ಹಾಸನ ಡಿಸಿಯಷ್ಟೆ. ನನ್ನ ಅಧಿಕಾರ ಮಿತಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಕಾರ್ಯಶೈಲಿ ಹಿಂದಿನಂತೆ ಇರಲಿದೆ. ಏಕಾಏಕಿ ಬದಲಾವಣೆ ಮಾಡಿಕೊಳ್ಳಲು ಆಗುವುದಿಲ್ಲ. ಯೋಜಿತ ಕೆಲಸ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲು ಯತ್ನಿಸುವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *