ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಬೇಸತ್ತು ಕೇರಳ ಮೂಲದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ.
ದಾದ್ರಾ ಮತ್ತು ನಗರ ಹವೇಲಿಯ ಪ್ರಮುಖ ಇಲಾಖೆಗಳ ಕಾರ್ಯದರ್ಶಿಯಾಗಿ ಗೋಪಿನಾಥನ್ ಕಾರ್ಯ ನಿರ್ವಹಿಸಿದ್ದರು. ಉತ್ತಮ ಸೇವೆ ನೀಡಿ ಮೆಚ್ಚುಗೆ ಪಡೆದಿದ್ದ ಗೋಪಿನಾಥನ್ ಅವರು ಈಗ ಕೇಂದ್ರ ಸರ್ಕಾರದ ನಡೆಗೆ ಬೇಸತ್ತಿದ್ದಾರೆ. ಏಳು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆಗಸ್ಟ್ 21ರಂದು ತಮ್ಮ ರಾಜೀನಾಮೆಯನ್ನು ನೀಡಿದ್ದರು.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ರಾಜೀನಾಮೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಸುಮಾರು 20 ದಿನಗಳಿಂದ ಕಾಶ್ಮೀರಿಯರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುವುದು ಬೇಸರವಾಗಿದೆ. ಈ ಬಗ್ಗೆ ಧ್ವನಿಯತ್ತಲು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಅನೇಕ ಭಾರತೀಯರಿಗೆ ಇದು ಸರಿಯಾದ ನಿರ್ಧಾರ ಅನಿಸಬಹುದು. 370 ನೇ ವಿಧಿ ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ. ಕೇಂದ್ರದ ನಡೆಯನ್ನು ಅನುಸರಿಸುವುದು ಅಥವಾ ಪ್ರತಿಭಟಿಸುವುದು ಅವರ ಹಕ್ಕು. ಆದ್ರೆ ಆ ಹಕ್ಕನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಗೋಪಿನಾಥನ್ ಹೇಳಿದರು.
Advertisement
ಇದು 1970 ಅಲ್ಲ, ಆಗ ತುರ್ತು ಪರಿಸ್ಥಿತಿ ಘೋಷಿಸಿದಾಗ ಮೂಲಭೂತ ಹಕ್ಕುಗಳ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಇದು 2019, ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಸುಲಭದ ಮಾತಲ್ಲ. ಅದನ್ನು ವಿರೋಧಿಸಿ ಧ್ವನಿ ಎತ್ತುವ ಮಂದಿ ಸಾಕಷ್ಟಿದ್ದಾರೆ. ಸರ್ಕಾರಿ ಹುದ್ದೆಯಲಿದ್ದರೆ ಕಾಶ್ಮೀರಿಯರ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವ ಹಕ್ಕು ನಮಗಿರುವುದಿಲ್ಲ. ನಾವು ವಿರೋಧಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ನಾನು ಪತ್ರಿಕೆಯನ್ನು ಶುರುಮಾಡಿದರೆ. ನಾಳೆಯ ನನ್ನ ಶೀರ್ಷಿಕೆ ಕೇವಲ 20 ಸಂಖ್ಯೆಗೆ ಸೀಮಿತವಾಗಿರುತ್ತದೆ. ಯಾಕೆಂದರೆ ಕಾಶ್ಮೀರಿಯರು 20 ದಿನಗಳಿಂದ ನಿರ್ಬಂಧಗಳ ನಡುವೆ ಜೀವನ ನಡೆಸುತ್ತಿದ್ದಾರೆ ಎಂದರು.
ಹಾಗೆಯೇ ಮುಂದಿನ ಜೀವನದ ಬಗ್ಗೆ ಯೋಚಿಸಿಲ್ಲ. ನಾನು ಕೇಂದ್ರದ ನಡೆ ವಿರುದ್ಧ ಹೆಚ್ಚೇನು ಹೋರಾಡಿಲ್ಲ, ಆದರೆ ಮುಂದಿನ 20 ವರ್ಷಗಳ ನಂತರ ಯಾರಾದರೂ ವಾಸ್ತವ ತುರ್ತು ಪರಿಸ್ಥಿತಿಯಲ್ಲಿ ನೀವೇನು ಮಾಡಿದ್ದೀರಾ? ಎಂದು ಪ್ರಶ್ನಿಸಿದರೆ, ನಾನು ಆಗ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೆ ಎನ್ನುತ್ತೇನೆ ಎಂದು ಪ್ರತಿಕ್ರಿಯಿಸಿದರು.