– ಬಡ ವಿದ್ಯಾರ್ಥಿಗಳ ಪಾಲಿನ ಐಕಾನ್ ಇನ್ನು ನೆನಪಷ್ಟೇ
ಕಲಬುರಗಿ: ಬೆಸ್ಕಾಂ ಎಂಡಿ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಕಲಬುರಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಹುಟ್ಟೂರು ಬೆಳಗಾವಿಯ (Belagavi) ರಾಮದುರ್ಗದಲ್ಲಿ (Ramadurga) ಇಂದು ಬೀಳಗಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕಡುಬಡತನದಿಂದಲೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಇಡೀ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಇಂತಹ ದಕ್ಷ ಅಧಿಕಾರಿಯಾದ ಮಹಾಂತೇಶ್ ಬೀಳಗಿ ಮಂಗಳವಾರ ಕಲಬುರಗಿಯಲ್ಲಿ (Kalaburagi) ನಡೆದ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ – ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ಮದುವೆ ಕಾರ್ಯಕ್ರಮಕ್ಕಾಗಿ, ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬೆಳಗಾವಿಯ ರಾಮದುರ್ಗದಿಂದ ಕಲಬುರಗಿಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೇನು 60 ಕಿ.ಮೀ ಸಂಚರಿಸಿದ್ರೆ ಸಂಬಂಧಿಕರ ಮನೆಗೆ ತಲುಪುತ್ತಿದ್ದರು. ಆದರೆ ಅಷ್ಟರಲ್ಲಿ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಇವರ ವಾಹನಕ್ಕೆ ಅಡ್ಡಲಾಗಿ ಬೈಕ್ ಸವಾರನೋರ್ವ ಬಂದ ಪರಿಣಾಮ ಬೈಕ್ ಸವಾರನನ್ನು ಉಳಿಸಲು ಹೋಗಿ ಸೇತುವೆಗೆ ರಭಸವಾಗಿ ಕಾರ್ ಡಿಕ್ಕಿ ಹೊಡೆದು ಸೇತುವೆಯ ಕೆಳಗೆ ಕಾರು ಪಲ್ಟಿಯಾಗಿದೆ. ಈ ವೇಳೆ ಈರಣ್ಣ ಬೀಳಗಿ ಹಾಗು ಹಾಗೂ ಶಂಕರ್ ಬೀಳಗಿ ಸ್ಥಳದಲ್ಲೆ ಸಾವನಪ್ಪಿದ್ರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹಾವೇರಿ | ಶಾರ್ಟ್ ಸರ್ಕ್ಯೂಟ್‌ನಿಂದ 2 ಮೊಬೈಲ್ ಮಳಿಗೆಗಳು ಸುಟ್ಟು ಭಸ್ಮ
ಬೀಳಗಿ ಮನೆಯಲ್ಲಿ ನೀರವ ಮೌನ:
ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟನಲ್ಲಿರುವ ಮಹಾಂತೇಶ್ ನಿವಾಸದಲ್ಲಿ ಸಂಬಂಧಿಕರು, ಜನರು ಜಮಾವಣೆಗೊಂಡಿದ್ದಾರೆ. ಸಾವಿನ ಸುದ್ದಿ ಕೇಳಿ ಮಹಾಂತೇಶ್ ಬೀಳಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಮನೆಗೆ ಆಗಮಿಸಿ ಬೀಳಗಿ ನೆನೆದು ಭಾವುಕರಾದರು. ಆಸ್ಪತ್ರೆಗೆ ಕಲಬುರಗಿ ಜಿಲ್ಲೆಯ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ ವಿದೇಶಿ ಜೋಡಿಗಳು
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನಿವಾಸಿಯಾದ ಮಹಾಂತೇಶ್ ಬೀಳಗಿ 1974ರ ಮಾರ್ಚ್ 27ರಂದು ಜನಿಸಿದರು. ಕಡು ಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದ್ದ ಬೀಳಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಮದುರ್ಗದಲ್ಲಿ ಪಡೆದು ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ್ ಬೀಳಗಿ 2012ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಧಾರವಾಡದಲ್ಲಿರುವ ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ಬಳಿಕ ಕೆಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿ ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದರು. ಇದನ್ನೂ ಓದಿ: ಮಹಾಂತೇಶ್ ಬೀಳಗಿ ನಿಧನಕ್ಕೆ ಸಿಎಂ ಸೇರಿ ರಾಜಕೀಯ ಗಣ್ಯರ ಸಂತಾಪ
ಬೀಳಗಿ ಅವರ ಹುಟ್ಟೂರು ಬೆಳಗಾವಿಯ ರಾಮದುರ್ಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಒಟ್ಟಾರೆ, ರಾಜ್ಯ ಓರ್ವ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿರೋದು ದುರಂತವೇ ಸರಿ. ಇದನ್ನೂ ಓದಿ: ಟಿ20 ವಿಶ್ವಕಪ್ | ಬೆಂಗಳೂರಿನಲ್ಲಿ ಪಂದ್ಯವಿಲ್ಲ – 8 ಮೈದಾನಗಳಲ್ಲಿ ಟೂರ್ನಿ

