Connect with us

Chikkaballapur

ಪ್ರತಿನಿತ್ಯ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ

Published

on

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಫೌಜಿಯಾ ತರನುಮ್‍ರವರು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಾ ಮಾದರಿಯಾಗಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಮ್ಮ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಸಾಗಲೇಬೇಕು ಅಂತ ಫೌಜಿಯಾ ಅವರು ಗುರಿ ಇಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಟೊಂಕ ಕಟ್ಟಿ ನಿಂತು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಫೌಜಿಯಾರವರು ತಾವೇ ಶಿಕ್ಷಕಿಯಾಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.

ಈ ಬಾರಿ ಏನಾದರೂ ಮಾಡಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ತಮ್ಮ ಜಿಲ್ಲೆಯನ್ನ ಟಾಪ್ 10 ಸ್ಥಾನದಲ್ಲಿ ತರಲೇಬೇಕು ಅಂತ ಗುರಿ ಇಟ್ಟುಕೊಂಡಿರೋ ಸಿಇಒ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನ ರೂಪಿಸಿದ್ದಾರೆ. ಪ್ರತಿ ದಿನ ತಾವು ಜಿಲ್ಲೆಯ ಯಾವುದೇ ಗ್ರಾಮ್ಕಕ್ಕೆ ಹೋದರೂ ಅಲ್ಲಿನ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು ಪಾಠ ಪ್ರವಚನ ಮಾಡ್ತಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳಿಂದ ಆತ್ಮಸ್ಥೈರ್ಯ ತುಂಬುವ ಕಾಯಕ ಮಾಡ್ತಿದ್ದಾರೆ.

ಸ್ವತಃ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡೋ ಸಿಇಒ ಫೌಜಿಯಾ ಅವರು, ಮೊದಲಿಗೆ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ನಡೆಸಿ ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವಂತೆ ವಿಶೇಷ ತರಗತಿಗಳನ್ನ ಮಾಡುವಂತೆ ಸೂಚಿಸಿದ್ದಾರೆ. ತದನಂತರ ಮನೆಯಲ್ಲಿ ಬೆಳಗಿನ ಜಾವ ಬೇಗ ಎದ್ದು ಮಕ್ಕಳು ಓದುವಂತೆ ಮಾಡಲು ಮಿಸ್ಡ್ ಕಾಲ್ ಕಾರ್ಯಕ್ರಮ ರೂಪಿಸಿದ್ದಾರೆ.

ವಿದ್ಯಾರ್ಥಿಗಳಲ್ಲೇ 4 ತಂಡಗಳಾಗಿ ಮಾಡಿ ಆ ವಿದ್ಯಾರ್ಥಿಗಳ ಹೊಣೆಯನ್ನ ಆಯಾ ಶಾಲೆಯ ಶಿಕ್ಷಕರಿಗೆ ಹೊರಿಸಿ ದತ್ತು ನಿಯಮ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪರೀಕ್ಷೆ ಅಂದರೆ ಸಾಕು ವಿದ್ಯಾರ್ಥಿಗಳು ಭಯಪಡ್ತಾರೆ ಅಂತ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ತಾವೇ ಮಾಡೆಲ್ ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನ ಹೋಗಲಾಡಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಸಿಇಒ ಕಾರ್ಯ ವೈಖರಿಗೆ ಸ್ವತಃ ಶಿಕ್ಷಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರು ಸಹ ಹಬ್ಬ ಹರಿದಿನ, ರಜಾ ಅಂತ ಕಾಲ ಕಳೆಯದೆ ವಿದ್ಯಾರ್ಥಿಗಳನ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟವಾಗಿದ್ದು, ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳು ಪಾಸಾಗಬೇಕು ಅಂತ ಸಿಇಒ ಗುರಿ ಹೊಂದಿದ್ದಾರೆ. ಆನೇಕ ಕಾರ್ಯಕ್ರಮಗಳನ್ನ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ಎರಡು ವರ್ಷದ ಹಿಂದೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ಬಾರಿ 20ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಈ ವರ್ಷ ಟಾಪ್ 10 ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯೂ ಬರಬೇಕು ಅಂತ ಫೌಜಿಯಾ ಅವರು ಶ್ರಮ ಪಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *