ಬೆಂಗಳೂರು: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದು, ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿಬಂದಿದೆ.
ಕಾಂಗ್ರೆಸ್ ಹಗರಣದ ಆರೋಪ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಸುಮಾರು 40 ನಿಮಿಷ ಇಬ್ಬರು ಪ್ರತ್ಯೇಕ ಚರ್ಚೆ ನಡೆಸಿ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿಎಂಗೆ ಪರಮೇಶ್ವರ್ ನೀಡಿದ್ದಾರೆ. ಸಿಬಿಐ ತನಿಖೆಗೆ ಒತ್ತಾಯಗಳು ಕೇಳಿ ಬರುತ್ತಿರುವುದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವುದರಿಂದ ಯಾವ ರೀತಿಯ ತನಿಖೆ ನಡೆಸಿದ್ರೆ ಒಳಿತು ಅನ್ನುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೇ ವಿಪಕ್ಷಗಳ ಆರೋಪಕ್ಕೆ ತಿರುಗುಬಾಣ ರೂಪಿಸುವ ಬಗ್ಗೆಯೂ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬೆಳಗ್ಗೆ ಮಾತುಕತೆ ನಡೆಸಿದ್ದಾರೆ.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಏನು ಅಂತಾ ಗೊತ್ತಿಲ್ಲ. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ತಿವಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತಾ ವರದಿ ಬಂದಿದೆ. ನಾವು ಯಾವುದೇ ತನಿಖೆಗೆ ಸಹಕಾರ ಕೊಡಲು ಸಿದ್ಧ. ಹೀಗಾಗಿ ಕೇಂದ್ರ ಸರ್ಕಾರ ಯಾವ ತನಿಖೆ ಬೇಕಾದ್ರು ನಡೆಸಲಿ. ಹಗರಣ ಆಗಿದೆ ಅಂತಾ ಯಾರೋ ಹೇಳಿದ್ದನ್ನ ನಂಬೋದಕ್ಕೆ ಆಗಲ್ಲ ಅಂತಾ ಹೇಳಿದರು.
Advertisement
ಪರಮೇಶ್ವರ್ ಮಾತನಾಡಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಬಾರದಿತ್ತು, ಇದು ಸರಿಯಲ್ಲ. ರಾಜಕೀಯ ಕಾರಣಗಳಿದ್ರೆ ಹೊರಗೆ ಪ್ರಸ್ತಾಪ ಮಾಡಲಿ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಬಾರದಿತ್ತು ಎಂದು ಹೇಳಿದರು.
Advertisement
ದಲಿತರ ಮನೆಯಲ್ಲಿ ಬಿಜೆಪಿ ಊಟ ಮಾಡ್ತೀವಿ ಅಂತ ಹೇಳಿ ತುಮಕೂರು ಹೋಟೆಲ್ ನಿಂದ ಆಹಾರ ತಂದು ತಿಂದ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ನೀವೇ ಬಯಲು ಮಾಡಿದ್ದೀರಾ, ಅದ್ಕೆ ಏನು ಕಾಮೆಂಟ್ ಮಾಡೋದು..? ಅಂತಾ ಸುದ್ದಿಗಾರರ ಜೊತೆ ಮಾತನಾಡುತ್ತಾ ಬಿಜೆಪಿ ವಿರುದ್ಧ ಅವರು ವ್ಯಂಗ್ಯವಾಡಿದ್ದಾರೆ.
ತನಿಖೆಗೆ ಸಹಕಾರ: ತಿವಾರಿ ನಿಗೂಢ ಸಾವಿನ ವಿಚಾರವಾಗಿ ಮಂಗಳೂರಿನಲ್ಲಿ ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಮಾಧ್ಯಮದವರ ಜೊತೆ ಮಾತನಾಡಿ, ತಿವಾರಿ ಕಳೆದ ಜನವರಿ ನಾಲ್ಕರಂದು ಇಲಾಖೆಗೆ ಸೇರಿದ್ದರು. ಒಟ್ಟು 132 ದಿನ ಇಲಾಖೆಯಲ್ಲಿದ್ದರೂ 37 ದಿನಗಳಷ್ಟೆ ಕೆಲಸ ಮಾಡಿದ್ದರು. ಜನವರಿ 18ರಂದು ಪಂಜಾಬ್ ಚುನಾವಣೆಗೆ ಹೋಗಿದ್ದರು. ಮೇ 5ರಂದು ಐಎಎಸ್ ತರಬೇತಿಗೆಂದು ರಜೆಯಲ್ಲಿ ತೆರಳಿದ್ದರು. ಇದೀಗ ಅಧಿಕಾರಿ ಯುಪಿಯಲ್ಲಿ ಸಾವನ್ನಪ್ಪಿದ್ದಾರೆ, ಅಲ್ಲಿ ಏನಾಗಿದೆಯೋ ಗೊತ್ತಿಲ್ಲ. ಇಲಾಖೆಯಲ್ಲಿ ಹಗರಣ ನಡೆದಿರುವ ಬಗ್ಗೆ ಒಮ್ಮೆಯೂ ಹೇಳಿರಲಿಲ್ಲ. ಲಿಖಿತವಾಗಿ ಅಥವಾ ಮೌಖಿಕವಾಗಿಯೂ ಪ್ರಸ್ತಾವ ಮಾಡಿರಲಿಲ್ಲ. ಯುಪಿ ಸರಕಾರದ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ನಡೆಸುವುದು ದುರದೃಷ್ಟಕರ. ಸಿಬಿಐ ತನಿಖೆ ನಡೆಸುವುದಿದ್ದರೆ ಯುಪಿ ಸರಕಾರ ಕೊಡಲಿ. ನಮ್ಮ ಸರಕಾರ ಯಾವುದೇ ತನಿಖೆಗೂ ಸಿದ್ಧವಿದೆ ಅಂತಾ ಸ್ಪಷ್ಟಪಡಿಸಿದ್ದಾರೆ.