ಹಾಸನ: ಪ್ರಾಥಮಿಕ ಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಜಿಲ್ಲೆಯ ಗ್ರಾಮೀಣ ಭಾಗದ ಯುವಕನೊಬ್ಬ ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಅರಸೀಕೆರೆ ತಾಲೂಕಿನ ಹರಳಕಟ್ಟ ಗ್ರಾಮದ ದರ್ಶನ್ ಐಎಎಸ್ ಪಾಸ್ ಮಾಡಿರುವ ಯುವಕ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಅಮೆರಿಕಾದಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡಿದ್ದರು. ದರ್ಶನ್ ಐಎಎಸ್ ಮಾಡಬೇಕೆಂಬ ಕನಸು ಕಂಡಿದ್ದರು. ಅದಕ್ಕಾಗಿ ಎರಡೂವರೆ ಲಕ್ಷದ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ವಾಪಸ್ಸಾಗಿದ್ದರು.
Advertisement
ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಕೂಡ ಪಡೆದಿದ್ದು, ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದಿರುವ ದರ್ಶನ್ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
Advertisement
ಫೆಬ್ರವರಿ ತಿಂಗಳಲ್ಲಿ ಸಂದರ್ಶನ ನಡೆಯಲಿದೆ. ಐಎಎಸ್ ಫಲಿತಾಂಶ ಬಂದ ನಂತರ ದರ್ಶನ್ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿದ ದರ್ಶನ್ ಅವರಿಗೆ ಸಂಬಂಧಿಕರು ಮತ್ತು ಹಿತೈಷಿಗಳು ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ.