ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಮಂಗಳವಾರ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಿತು. ನಾನೂ ಗೌರಿ ಹೆಸರಿನ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು, ಚಿಂತಕರು, ಪ್ರಗತಿಪರರು, ವಿಚಾರವಾದಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕಡೆ ಬೊಟ್ಟು ಮಾಡಿದ ಇವರು ಹಿಂಸೆಯನ್ನು ವಿರೋಧಿಸಿದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಮಾದರಿಯಲ್ಲೇ ಗೌರಿ ಲಂಕೇಶ್ ಹತ್ಯೆಯಾಗಿದೆ. ದಾಬೋಲ್ಕರ್‍ರಿಂದ ಗೌರಿ ತನಕ ನಡೆದ ಹತ್ಯೆಗಳಲ್ಲಿ ಗೋವಾದ ಸನಾತನ ಸಂಸ್ಥೆಯಂತ ಮೂಲಭೂತವಾದಿಗಳ ಕೈವಾಡವಿದೆ ಎಂದು ಆರೋಪಿಸಿದ್ರು. ಭಾಷಣದ ವೇಳೆ ಕೆಲವರು ಕಣ್ಣೀರಿಟ್ಟರು.
Advertisement
ಬೇಟಿ ಬಚಾವ್-ಬೇಟಿ ಪಡಾವ್ ಅಂತಾ ಘೋಷಣೆ ಮಾಡ್ತಾರೆ. ಆದರೆ ಆಕೆ ಹೆಚ್ಚು ಮಾತನಾಡಿದರೆ ಗುಂಡಿಟ್ಟು ಹೊಡೆದು ಉರುಳಿಸ್ತಾರೆ ಅಂತಾ ಕೇಂದ್ರದ ವಿರುದ್ಧ ಹರಿಹಾಯ್ದರು. ರ‍್ಯಾಲಿಯಲ್ಲಿ ಮಾತಾಡಿದ ಪ್ರಗತಿಪರರರು, ಚಿಂತಕರ ಹತ್ಯೆ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡೋದಾಗಿ ಹೇಳಿದರು. ವಿಶೇಷ ಅಂದರೆ ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ ರಾಜಘಟ್ಟ ತಮ್ಮ ವಿದೇಶಿ ಪತ್ನಿ ಜೊತೆ ಸಮಾವೇಶಕ್ಕೆ ಬಂದಿದ್ದರು.
Advertisement
ನನಗೆ 99 ವರ್ಷ ವಯಸ್ಸು, ಈ ವಯಸ್ಸಿನಲ್ಲೂ ನನಗೆ ಹೋರಾಡುವ ಕಿಚ್ಚಿದೆ. ಆದ್ರೆ, ನಿಮ್ಮಲ್ಲಿ ಯಾಕೆ ಇಲ್ಲ ಕಿಚ್ಚು? ದ್ವೇಷ ಪ್ರಚೋದಿಸುವ ಧರ್ಮವನ್ನ ನಾವು ಒಪ್ಪಲ್ಲ. ಬದಲಾವಣೆಗೆ ಈ ಹೋರಾಟ ಅನಿವಾರ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಿರಿಯರನ್ನು ಪ್ರಶ್ನಿಸಿದರು.
Advertisement
ಅನೇಕ ಗೌರಿಯರಿಗೆ ನಮಸ್ಕಾರ ಎಂದು ಕಣ್ಣೀರು ಸುರಿಸುತ್ತಾ ಮಾತು ಆರಂಭಿಸಿದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ನೀವೆಲ್ಲಾ ನನ್ನ ಗೌರಿಯರು ಎಂದರು. ಸಾಹಿತಿ ಚಂಪಾ, ಸತ್ತವರು ಎಲ್ಲಿ ಹೋಗುತ್ತಾರೆ, ನೆನಪಿನಾಳದಲ್ಲಿ ಪ್ರತಿಭಟನೆ ಕಾವು ಕೊಡುತ್ತಲೇ ಇರುತ್ತಾರೆ ಎಂದು ಕವನ ವಾಚನ ಮಾಡಿದರು.
Advertisement
ಕೇಂದ್ರ ರೈಲ್ವೇ ನಿಲ್ದಾಣದಿಂದ ಶುರುವಾದ ನಾನು ಗೌರಿ ಬೃಹತ್ ರ‍್ಯಾಲಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಕ್ತಾಯಗೊಂಡಿತು. ನಗಾರಿ ಬಾರಿಸುವ ಮೂಲಕ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ದೊರೆಸ್ವಾಮಿಯವರು ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಗೌರಿಗೆ ಪೆರಿಯಾರ್ ಪ್ರಶಸ್ತಿ ಘೋಷಣೆ ಆಯ್ತು. ಶೀಘ್ರ ಕ್ರಮಕ್ಕೆ ಹಕ್ಕೋತ್ತಾಯ ಮಾಡಲಾಯ್ತು.
ಪ್ರತಿರೋಧ ಸಮಾವೇಶಕ್ಕೆ ಸ್ವಯಂಪ್ರೇರಿತವಾಗಿ ಸಾವಿರಾರು ಮಂದಿ ಬಂದಿದ್ದರು. ವಿಶೇಷ ಎಂದರೆ ಸಚಿವರಾದ ಖಾದರ್, ಹೆಚ್‍ಎಂ ರೇವಣ್ಣ, ಸಿಪಿಎಂ ನಾಯಕ ಸೀತಾರಂ ಯೆಚೂರಿ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಹಿತಿ ದೇವನೂರು ಮಹಾದೇವ, ಪತ್ರಕರ್ತ ಪಿ. ಸಾಯಿನಾಥ್, ತೀಸ್ತಾ ಸೆಟಲ್ವಾಡ್, ಮುರುಘಾಶ್ರೀಗಳು, ಸ್ವಾಮಿ ಅಗ್ನಿವೇಶ್, ಸ್ವರಾಜ್ ಇಂಡಿಯಾ ಮುಖಂಡರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್, ಜಿಗ್ನೆಶ್ ಮೇವಾನಿ ನಟ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯಗಳು:
1. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಮುಖಾಂತರ ತೀವ್ರಗೊಳಿಸಿ, ಕಾಲನಿಗದಿತವಾಗಿ ಮುಗಿಸಿ ಹಂತಕರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು.
2. ಗೌರಿ ಲಂಕೇಶ್‍ರು ಕಳೆದ ಒಂದೂವರೆ ದಶಕಗಳಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವತೆಯ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಹಾಗೂ ಹೋರಾಟವನ್ನು ನಡೆಸಿದ್ದರು. ಅವರು ಮಾತ್ರವಲ್ಲದೇ, ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ಹಲವಡೆ ನಡೆಯುತ್ತಿದೆ. ಹಾಗಾಗಿ ಈ ಆಯಾಮಗಳನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಈ ಸಮಾವೇಶವು ಒತ್ತಾಯಿಸುತ್ತದೆ.
3. ಆರ್‍ಎಸ್‍ಎಸ್, ಹಿಂದೂ ಜಾಗರಣ ವೇದಿಕೆ, ವಿಎಚ್‍ಪಿ, ಭಜರಂಗದಳ, ಶ್ರೀರಾಮಸೇನೆ, ಸನತನ ಸಂಸ್ಥೆ ಇತ್ಯಾದಿ ಆರೆಸ್ಸೆಸ್‍ನ ಅಂಗಸಂಘಟನೆಗಳ ಸದಸ್ಯರು/ಬೆಂಬಲಿಗರು ಈ ಹತ್ಯೆಯನ್ನು ಸಂಭ್ರಮಿಸಿದ ದುರಂತವು ಈ ನಾಡಿನಲ್ಲಿ ನಡೆದುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಹಾಗೆಯೇ ಬಿಜೆಪಿಯ ನಾಯಕರುಗಳು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿ ಮಾತಾಡಿದ್ದನ್ನೂ ಈ ನಾಡು ನೋಡಿದೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದ್ಧವಾದ ಇಂತಹ ಅಮಾನವೀಯ ನಡವಳಿಕೆಗಳನ್ನು ಸಮಾವೇಶವು ಖಂಡಿಸುತ್ತದೆ. ಈ ಬಗೆಯ ಮನಸ್ಥಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡುವುದು ನಾಗರಿಕ ಸಮಾಜದ ಸರ್ಕಾರಗಳ ಕರ್ತವ್ಯವಾಗಿದೆ. ಆ ಒಟ್ಟಿನಲ್ಲಿ ಕರ್ನಟಕ ಸರ್ಕರವು ಪರಿಣಾಮಕಾರಿ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಆಗ್ರಹಿಸಿಸುತ್ತೇವೆ.