ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ

Public TV
4 Min Read
dkshi 1

ಬೆಂಗಳೂರು: ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ಇದೆಲ್ಲಾ ದುಡಿದ ಆಸ್ತಿ. ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರಿಗೂ ಅಭಿನಂದನೆಗಳು. ಆಗಸ್ಟ್ 2 2017ರಿಂದ ನನ್ನ ಬಗ್ಗೆ ವಿವಿಧ ರೀತಿಯಲ್ಲಿ ನೀವೆಲ್ಲಾ ವ್ಯಾಖ್ಯಾನ ಮಾಡಿದ್ದೀರಿ. ಪ್ರಜಾಪ್ರಭುತ್ವದಲ್ಲಿ ನಾನು ಈ ಬಗ್ಗೆ ನಾನು ಮಾತನಾಡಲ್ಲ. ಅದು ನಿಮ್ಮ ಹಕ್ಕು, ಕೆಲವರು ಸತ್ಯಾಂಶ ಮಾಡಿದ್ದೀರಿ, ಕೆಲವರು ಇರೋ ವಿಚಾರವನ್ನ ತಿರುಚಿ ತಮ್ಮದೆಯಾದ ರೀತಿಯಲ್ಲಿ ಕಲ್ಪನೆ ಮಾಡಿಕೊಂಡಿದ್ದೀರಿ. ನಿಮ್ಮ ಅನುಕೂಲಕ್ಕೆ ಯಾವ ರೀತಿ ಬಿಂಬಿಸಬೇಕೋ ಹಾಗೆ ಬಿಂಬಿಸಿದ್ದೀರಿ ಎಂದರು.

dkshi 2

ಪಕ್ಷದ ನಿಷ್ಠಾವಂತ ಸೈನಿಕನ ರೀತಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗುಜರಾತ್, ಮಹಾರಾಷ್ಟ್ರ ಹಾಗೂ ನಮ್ಮ ಶಾಸಕರನ್ನು ಕಾಪಾಡುವ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದೇನೆ. ಕಳೆದ 40 ವರ್ಷದಿಂದ ನನ್ನದೆ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೆಲವೊಮ್ಮೆ ಟೀಕೆ ಮಾಡಿರಬಹುದು, ಕೆಲವೊಮ್ಮೆ ಸಹಾಯ ಮಾಡಿರಬಹುದು. ನನ್ನ ಹೋರಾಟದಲ್ಲಿ ಕೆಲವರು ಸಂತೋಷ ಪಟ್ಟಿರಬಹುದು, ಕೆಲವರು ದು:ಖ ಪಟ್ಟಿರಬಹುದು. ಪಕ್ಷಕ್ಕಾಗಿ ನಿರಂತರವಾಗಿ ಪ್ರಾಮಾಣಿಕೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಈಗ ನನ್ನ ಮೇಲೆ, ನನ್ನ ಕುಟುಂಬ ಹಾಗೂ ಸ್ನೇಹಿತರ ಮೇಲೆ ಇಡಿ ದಾಳಿ ನಡೆಸಿದೆ. ಈ ಬಗ್ಗೆ ನಾನು ನಮ್ಮ ಶಾಸಕರ ಜೊತೆ ರೆಸಾರ್ಟಿನಲ್ಲಿದ್ದಾಗ ನೀವು ತೋರಿಸಿದ್ದೀರಿ ಎಂದು ತಿಳಿಸಿದರು.

ನಾನೊಬ್ಬ ಕಾನೂನಿಗೆ, ನ್ಯಾಯಕ್ಕೆ ಗೌರವ ಕೊಡುವ ಶಾಸಕ. ನ್ಯಾಯಾಲಯಕ್ಕೆ, ಶಾಸಕಾಂಗಕ್ಕೆ ಏನೆಲ್ಲಾ ಗೌರವ ಕೊಡಬೇಕು ಅದನ್ನು ನಾನು ಕೊಡುತ್ತೇನೆ, ಈ ಬಗ್ಗೆ ನನಗೆ ಅರಿವಿದೆ ಸಮಯದ ಪ್ರಜ್ಞೆ ಕೂಡ ಇದೆ. ಅನೇಕ ಸಂದರ್ಭದಲ್ಲಿ ನನಗೆ ಸಾಕಷ್ಟು ನೋಟಿಸ್ ಬಂದಿದೆ. ನನ್ನ ಸ್ನೇಹಿತರಿಗೂ ಬಂದಿರುವ ನೋಟಿಸ್‍ಗೆ ನಾನೇ ಉತ್ತರ ಕೊಟ್ಟಿದ್ದೇನೆ, ಕೆಲವೊಮ್ಮೆ ನಮ್ಮ ಆಡಿಟರ್‍ಗಳನ್ನು ಕಳುಹಿಸಿ ಉತ್ತರ ಕೊಟ್ಟಿದ್ದೇನೆ, ಕೊಡುತ್ತಿದ್ದೇನೆ, ಇನ್ನೂ ಸಾಕಷ್ಟು ಉತ್ತರ ಕೇಳುತ್ತಿರುವುದಕ್ಕೆ ಅದಕ್ಕೂ ನಾನು ಸ್ಪಂಧಿಸುತ್ತೇನೆ. ಇದನ್ನು ಹಲವರು ತಮ್ಮದೆಯಾದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಹೇಳಿದರು.

Congress 901x600

85 ವರ್ಷದ ನನ್ನ ತಾಯಿಗೆ ಇಬ್ಬರು ಗಂಡುಮಕ್ಕಳು ಒಬ್ಬ ಸಂಸದ ಇನ್ನೊಬ್ಬ ಮಾಜಿ ಮಂತ್ರಿ. ನಾನು ಬಡತನದಿಂದ ಬಂದವನೇನು ಅಲ್ಲ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಇದೆಲ್ಲಾ ನಾನು ಸಂಪಾದನೆ ಮಾಡಿರುವ ಆಸ್ತಿ, ಕುಟುಂಬದ ಆಸ್ತಿ. ಆದರೆ ಇದೆಲ್ಲಾ ಬೇನಾಮಿ ಆಸ್ತಿ ಎಂದು ಆದಾಯ ತೆರಿಗೆ ಇಲಾಖೆ ನಿರ್ಧಾರ ಮಾಡಿದೆ. ಇದನ್ನು ಪ್ರಶ್ನಿಸಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ, ತಡೆಯಾಜ್ಞೆ ತಂದಿದ್ದೇನೆ. ತಾಯಿ ಮಗನನ್ನು ನಂಬದೆ, ಮಗ ತಾಯಿಯನ್ನು ನಂಬದೆ ಮತ್ತೆ ಯಾರ ಮೇಲೆ ನಂಬಿಕೆ ಇಟ್ಟು ಬದುಕನ್ನ ನಡೆಸಬೇಕು? ಇದು ಸಾರ್ವಜನಿಕರಿಗೆ ತಿಳಿಸಬೇಕಾದ ವಿಚಾರ ಎಂದರು.

ಇದಾದ ಮೇಲೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದರು. ನಾವು ಈ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಸುಮಾರು 16 ದಿನ ಈ ಬಗ್ಗೆ ನಾನು ನ್ಯಾಯಾಧೀಶೆ ಮುಂದೆ ಕಟಕಟೆಯಲ್ಲಿ ನಿಂತು ಉತ್ತರ ನೀಡಿದ್ದೇನೆ. ಅದಕ್ಕೆ ಅವರು ಕೇಸ್ ಅನ್ನು ಡಿಸ್ಚಾರ್ಜ್ ಮಾಡಬೇಡಿ ಟ್ರಯಲ್ ಮಾಡಿ ಎಂದಿದ್ದಾರೆ. ಕಾನೂನನ್ನು ನಾವೇ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಅವಕಾಶ ಕೊಟ್ಟಿದ್ದೇವೆ. ನಾನು ಮೇಲ್ಮನೆಗೆ ಹೋಗಿ ಮನವಿ ಮಾಡಿದ್ದಕ್ಕೆ ಅಲ್ಲಿ ಕೂಡ ಅದಕ್ಕೆ ತಾತ್ಕಾಲಿಕ ತಡೆ ಕೊಟ್ಟಿದ್ದಾರೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿದ್ದ ಕೇಸ್ ಈಗ ಇಡಿಗೆ ಹೋಗಿದೆ. ನನ್ನ ಹಾಗೂ ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕಿರೋದು ನಾವು ದುಡಿದ ಹಣ. ಈ ಬಗ್ಗೆ ನಾವು ಸಾಕ್ಷಿಯನ್ನು ಕೂಡ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇವೆ. ಆದರೂ ಪತ್ತೆಯಾದ ಹಣ ನನ್ನ ದುಡ್ಡು ಎಂದು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಒಂದೂವರೆ ವರ್ಷ ಆದಮೇಲೆ, ಚುನಾವಣೆ ಹತ್ತಿರ ಬರುತ್ತಿದ್ದಾಗ ಇದನ್ನು ಮತ್ತೆ ತೆರೆದಿದ್ದಾರೆ. ಇಡಿ ಸಮನ್ಸ್ ಬಂದಿದೆ. ವಿಚಾರಣೆಗೆ ಕರೆದಿದ್ದಾರೆ. ಆದರೆ ನನಗೆ ವೈಯಕ್ತಿಕ ಕೆಲಸವಿದ್ದ ಕಾರಣಕ್ಕೆ ತಕ್ಷಣ ಬರಲು ಆಗುವುದಿಲ್ಲ ಎಂದು ಸಮಯ ಪಡೆದಿದ್ದೇನೆ. ನಾವು ತಪ್ಪು ಮಾಡಿಲ್ಲ. ಯಾರ ದುಡ್ಡನ್ನು ಹೊಡೆದಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ನಾನು ಕೋರ್ಟಿಗೆ ಹೋಗಿದ್ದೆ. ನಾನು ವೈಯಕ್ತಿಕ ಕೆಲಸ ಮೇಲೆ ಹೊರಹೋಗಿದ್ದೆ. ಆದರೆ ಮಾಧ್ಯಮ ಮಿತ್ರರು ನಾನು ಕೋರ್ಟಿನಲ್ಲಿಯೇ ಇದ್ದೇನೆ ಎಂದಿದ್ದರು. ಬಳಿಕ ನಾನು ರಾತ್ರಿ 9:30 ಆಸುಪಾಸಿಗೆ ಕುಟುಂಬದ ಜೊತೆ ಮನೆಗೆ ವಾಪಸ್ಸಾದೆ. ನಮ್ಮ ಕುಟುಂಬದವರ ಬಗ್ಗೆಯೂ ಮಾಧ್ಯಮದಲ್ಲಿ ತೋರಿಸುತ್ತಿದ್ದರು. ನಮಗೂ ವೈಯಕ್ತಿಕ ಕೆಲಸವಿರುತ್ತದೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

dkshi

ಇದನ್ನು ಕಾನೂನು ಚೌಕಟ್ಟಿನಲ್ಲೂ ಎದುರಿಸಬೇಕಾಗುತ್ತೆದೆ, ರಾಜಕೀಯವಾಗಿಯೂ ಎದುರಿಸ ಬೇಕಾಗುತ್ತದೆ. ನಾನು ತಪ್ಪು ಮಾಡಿಲ್ಲ, ಕೊಲೆ ಮಾಡಿಲ್ಲ, ಮೋಸ ಮಾಡಿಲ್ಲ. ನ್ಯಾಯಯುತವಾಗಿ ದುಡಿದಿದ್ದೇನೆ, ಬದುಕಿದ್ದೇನೆ. ಷಡ್ಯಂತ್ರಗಳನ್ನು ಮಾಡಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನ್ಯಾಯಯುತವಾಗಿ ಹೋರಾಡುತ್ತೇನೆ ಎಂದು ಹೇಳಿದರು.

ನಾನು ಹೆದರಿಕೊಂಡು ಹೋಗುವ ಕೆಂಪೇಗೌಡನ ಮಗನಲ್ಲ. ನಾನು ಕಾನೂನಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಎದುರಿಸುತ್ತೇನೆ. ನಮ್ಮ ಮನೆಗಳಲ್ಲಿ ಸಿಕ್ಕ ಹಣದ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ಬಿಜೆಪಿ ಆಪರೇಷನ್ ಮಾಡಿದಾಗ ಕೋಟಿಗಟ್ಟಲೆ ಹಣದ ವ್ಯವಹಾರ ಮಾಡಿರುವ ಬಗ್ಗೆ ಯಾಕೆ ಯಾರು ಪ್ರಶ್ನಿಸಿಲ್ಲ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಸದನದಲ್ಲಿ ಬಹಿರಂಗವಾಗಿಯೇ ಬಿಜೆಪಿ ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿರುವ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ. ಆದರೂ ಬಿಜೆಪಿ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಅಂದರೆ ಹೇಗೆ? ನಾನು ಯಾವುದಕ್ಕೂ ಹೆದರಲ್ಲ. ನಾನು ತಪ್ಪು ಮಾಡಿಲ್ಲ. ಇಡಿ ನೊಟಿಸ್‍ಗೆ ಗೌರವಿಸುತ್ತೇನೆ, ಅದಕ್ಕೆ ಉತ್ತರ ಕೂಡ ನೀಡುತ್ತೇನೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *