ಮುಂಬೈ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರ ತಂದೆ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.
ನನ್ನ ಮಗ ನಿಜಕ್ಕೂ ಒಬ್ಬ ಯೋಧ. ಆತನ ಬಗ್ಗೆ ನನಗೆ ಹೆಮ್ಮೆಯಿದ್ದು, ಆತ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಅಲ್ಲದೇ ಭಾರತೀಯರು ಕೂಡ ಮಗ ವಾಪಸ್ ಬರುವಂತೆ ಪ್ರಾರ್ಥಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಎಸ್. ವರ್ಥಮಾನ್ ಅವರು ಸಂದೇಶ ರವಾನಿಸಿದ್ದಾರೆ.
ಸಂದೇಶದಲ್ಲಿ ಏನಿದೆ?:
ನಿಮ್ಮೆಲ್ಲರ ಪ್ರೀತಿ, ಕಾಳಜಿ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ನಾನು ಈವಾಗಷ್ಟೇ ಪಾಕಿಸ್ತಾನ ಬಿಡುಗಡೆ ಮಾಡಿದೆ ವಿಡಿಯೋ ನೋಡಿದೆ. ಅಭಿನಂದನ್ ಜೀವಂತವಾಗಿದ್ದು, ಸೇನೆ ಕೇಳುತ್ತಿರುವ ಪ್ರಶ್ನೆಗಳಿಗೆಲ್ಲ ಧೈರ್ಯವಾಗಿ ಉತ್ತರಿಸುತ್ತಿದ್ದಾನೆ. ಆತ ನಿಜಕ್ಕೂ ಶುದ್ಧ ಮನಸ್ಸಿನ ಯೋಧ. ದೇವರ ಕೃಪೆ ಅಭಿ ಮೇಲಿದ್ದು, ಆತ ಯಾವುದೇ ಪ್ರಾಣಾಪಾಯವಿಲ್ಲದೇ ಭರತ ಭೂಮಿಗೆ ವಾಪಸ್ ಬರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನನಗೆ ಗೊತ್ತು ನಿಮ್ಮೆಲ್ಲರ ಆಶೀರ್ವಾದದ ಕೈಗಳು ಅಭಿನಂದನ್ ಮೇಲಿದೆ. ಆತನ ಸುರಕ್ಷಿತವಾಗಿ ಬಿಡುಗಡೆಯಾಗುವಂತೆ ನೀವೆಲ್ಲ ಪ್ರಾರ್ಥಿಸುತ್ತಿದ್ದೀರಾ. ಆತನಿಗೆ ಅಲ್ಲಿ ಯಾವುದೇ ತೊಂದರೆಯಾಗದಿರಲಿ ಹಾಗೂ ಸುರಕ್ಷಿತವಾಗಿ ಮರಳಲಿ ಎಂದು ನಾನು ಕೂಡ ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ನಮ್ಮ ಜೊತೆ ನೀವೆಲ್ಲ ಕೈ ಜೋಡಿಸಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಅಭಿನಂದನ್ ಪಾಕ್ ವಶವಾಗಿದ್ದು ಹೇಗೆ..?
ಪಾಕಿಸ್ತಾನ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನು ನುಗ್ಗಿಸಿ ದುಸ್ಸಾಹಸ ಮಾಡಿತ್ತು. ಭಾರತದ ಗಡಿ ದಾಟಿದ 3 ವಿಮಾನಗಳ ಪೈಕಿ, ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಪಾಕ್ ನೆಲದಲ್ಲಿ ಮಿಗ್ 22 ನೆಲಕ್ಕುರುಳಿದೆ. ಈ ವೇಳೆ ಅಭಿನಂದನ್ ಪ್ಯಾರಾಚೂಟ್‍ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಭಿನಂದನ್ ಯಾರು..?
45 ವರ್ಷದ ಅಭಿನಂದನ್ ಅವರು ಮೂಲತಃ ತಮಿಳುನಾಡಿನ ಸಿಂಹಕುಟ್ಟಿಯವರಾಗಿದ್ದಾರೆ. ವಿಂಗ್ ಕಮಾಂಡರ್ ಆಗಿರುವ ಅಭಿನಂದನ್ ಅವರಿಗೆ ಮಿಗ್ 21ನಲ್ಲೇ 3000 ಗಂಟೆ ಹಾರಾಟ ನಡೆಸಿರುವ ಅನುಭವವಿದೆ.
ಇವರ ತಂದೆಯ ಹೆಸರು ಎಸ್. ವರ್ಥಮಾನ್ ಆಗಿದ್ದು, ಇವರು ನಿವೃತ್ತ ಮಾರ್ಷಲ್ ಆಗಿದ್ದಾರೆ. ಪರಮವಿಶಿಷ್ಟ ಸೇವಾ ಪದಕ ಪಡೆದಿದ್ದ ವರ್ಥಮಾನ್, ಮಣಿರತ್ನಂ ನಿರ್ದೇಶನದ ಚೆಲಿಯಾ ಚಿತ್ರಕ್ಕೆ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಚೆಲಿಯಾ – ಕಾರ್ಗಿಲ್ ಯುದ್ಧದ ವೇಳೆ ಪಾಕ್‍ನಲ್ಲಿ ಯುದ್ಧ ಕೈದಿಯಾದ ಸೈನಿಕನ ಕಥೆಯಾಗಿರುವ ಚಿತ್ರವಾಗಿದೆ.
https://www.youtube.com/watch?v=05fJuSBr4ZE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv