ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ರೇವಣ್ಣ

Public TV
2 Min Read
bgk revanna 2

ಬಾಗಲಕೋಟೆ: ಮಾಜಿ ಸಚಿವ ಎ.ಮಂಜು ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡರಿಂದ ಮಾತ್ರ ಹಾಸನದಲ್ಲಿ ಗೆಲ್ಲೋಕೆ ಸಾಧ್ಯ, ಪ್ರಜ್ವಲ್‍ಗೆ ಸಾಧ್ಯವಿಲ್ಲ ಎಂಬ ಎ.ಮಂಜು ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ತಡರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಎ.ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲು ಆಗುತ್ತಾ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಲು ಆಗುತ್ತಾ? ಅವನಿಗೆ ನಾನು ರಿಯಾಕ್ಟ್ ಮಾಡಲ್ಲ, ಇಗ್ನೋರ್ ಮಾಡ್ತೀನಿ. ಅವನನ್ನು ಇಷ್ಟು ಹೊತ್ತಿನಲ್ಲಿ ನೆನಪು ಯಾಕೆ ಮಾಡ್ತೀರಿ ಎಂದು ರೇವಣ್ಣ ಗರಂ ಆಗಿಯೇ ಉತ್ತರಿಸಿದ್ದಾರೆ.

ಹಾಸನಕ್ಕೆ ದೇವೇಗೌಡರು ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರು ಸ್ಪರ್ಧಿಸಬೇಕೆಂದು ನೀವೇ ಹೇಳಿ. ಅವರನ್ನೇ ನಿಲ್ಲಿಸೋಣ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಸಿಎಂ ಕುಮಾರಸ್ವಾಮಿ ಈ ಸಲ ಬಜೆಟ್ ಮಂಡಿಸಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದ ರೇವಣ್ಣ, ನೂರಕ್ಕೆ ನೂರು ಸಮ್ಮಿಶ್ರ ಸರ್ಕಾರದಿಂದ ಬಜೆಟ್ ಮಂಡನೆ ಮಾಡ್ತೇವೆ. ಕುಮಾರಸ್ವಾಮಿ ಬಜೆಟ್ ಮಂಡನೆ ಕುರಿತು ಯಾವುದೇ ಅನುಮಾನ ಬೇಡ ಎಂದು ಹೇಳಿದರು.

bgk revanna

ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ಕೊಡ್ತಾರೆ, ನೀವು ಏನು ಯೋಚನೆ ಮಾಡಬೇಡಿ ಎಂದು ಹೇಳಿದಲ್ಲದೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತೇನಿಲ್ಲ. ರೈತರ ಸಾಲಮನ್ನಾ ಆಗಿದ್ದು ಉತ್ತರ ಕರ್ನಾಟಕಕ್ಕೆ ಅಧಿಕ. ಅದರಲ್ಲೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯಧಿಕವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾಕೆ ರೈತರ ಸಾಲಮನ್ನಾ ಮಾಡಿಲ್ಲ. ಯಾಕೆ ಬಿಜೆಪಿ ಅವರು ಒತ್ತಾಯಿಸಿಲ್ಲ ಎಂದು ಗರಂ ಆದರು.

bgk revanna 3

ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾರಂಭಿಸುವ ವಿಚಾರವಾಗಿ ಮಾತನಾಡಿದ ರೇವಣ್ಣ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಓಪನ್ ಮಾಡಲೇಬೇಕು. ಯಾರೋ ರೇವಣ್ಣ, ಕುಮಾರಸ್ವಾಮಿ ಮಕ್ಕಳಷ್ಟೇ ಓದಬೇಕೇನ್ರೀ? ಎಲ್‍ಕೆಜಿಯಿಂದ ಇಂಗ್ಲಿಷ್ ಮಿಡಿಯಂ ಮಾಡಲೇಬೇಕು, ಹೊಟ್ಟೆಗೆ ಹಿಟ್ಟಿಲ್ಲದವರ ಮಕ್ಕಳು ಏನ್ ಮಾಡಬೇಕು. ಕೂಲಿ ಮಾಡುವವರ ಮಕ್ಕಳು ಇಂಗ್ಲಿಷ್ ಓದಬಾರದೇನ್ರೀ? ವಿವಿಧ ಇಲಾಖೆ ಅನುದಾನ ಕಟ್ ಮಾಡಿ ಇಂಗ್ಲಿಷ್ ಶಾಲೆಗೆ ನೀಡಬೇಕು. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಸಾಹಿತಿಗಳು ತಮ್ಮ ಮಕ್ಕಳನ್ನು ಎಲ್ಲಿ ಓದಿಸ್ತಾರೆ. ಹಾಗಿದ್ರೆ ಇಂಗ್ಲಿಷ್ ಶಾಲೆ ಬಂದ್ ಮಾಡಿಬಿಡಲಿ. ನಾನೇನು, ಕನ್ನಡ ಶಾಲೆ ಬೇಡ ಅಂತಿಲ್ಲ. ಒಂದು ಭಾಷೆ ಕನ್ನಡ ಇರಲಿ. ಸಮಾಜ ಕನ್ನಡದಲ್ಲಿ ಹೇಳಿ, ಗಣಿತ, ವಿಜ್ಞಾನ ಇಂಗ್ಲಿಷ್ ನಲ್ಲಿ ಹೇಳಲಿ. ಆದರೆ ಯಾರು ಏನು ಅಂದ್ರೂ ಈ ವಿಷಯದಲ್ಲಿ ನನ್ನದು ನೋ ಕ್ವಶ್ಚನ್. ಎಲ್‍ಕೆಜಿಯಿಂದ ಇಂಗ್ಲಿಷ್ ಶಾಲೆ ಆರಂಭ ಆಗಲೇಬೇಕು ಎಂದು ಹೇಳಿದರು.

ಕಳೆದ 10 ವರ್ಷದಿಂದ ಹಾಸನದಲ್ಲಿ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದರು. ದೈವಾನುಗ್ರಹದಿಂದ ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನನ್ನ ಕಡೆ ಎಷ್ಟು ಸಾಧ್ಯವೋ ಅಷ್ಟು ಹಾಸನಕ್ಕೆ ಸಹಾಯ ಮಾಡ್ತೀನಿ ಎಂದು ರೇವಣ್ಣ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *