ಬೆಂಗಳೂರು: ತಮ್ಮ ವಿರುದ್ಧ ಎಸಿಬಿಯಲ್ಲಿ ಎಫ್‍ಐಆರ್ ದಾಖಲಾಗಿರೋದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಅವರು, ನನ್ನ ವಿರುದ್ಧ ಇಂತಹ ನೂರು ಕೇಸು ಹಾಕಿಸಿದ್ರೂ ಹೆದರಲ್ಲ. ಜಗ್ಗಲ್ಲ, ಬಗ್ಗಲ್ಲ. ನಮ್ಮ ಹೋರಾಟವನ್ನ ಹತ್ತಿಕ್ಕಲು ಸಿಎಂ ಹೀಗೆ ಮಾಡ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಕಿಂಚಿತ್ತಾದ್ರೂ ಇದ್ದಿದ್ರೆ ಇಂತಹ ಕೆಲಸಕ್ಕೆ ಕೈ ಹಾಕ್ತಿರಲಿಲ್ಲ. ಸಿಎಂ ಹಾಗೂ ಅವ್ರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾಲ ಬಂದಾಗ ಅವ್ರ ಜಾತಕ ಬಯಲು ಮಾಡುತ್ತೇನೆ ಅಂತಾ ಬಿಎಸ್‍ವೈ ಗುಡುಗಿದ್ರು.
Advertisement
ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಮರು ಜೀವ ನೀಡಿ ಸಿದ್ದರಾಮಯ್ಯ ರಾಜಕೀಯ ದ್ವೇಷ ಸಾಧನೆಗೆ ಹೊರಟಿದ್ದಾರೆ. ಆ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅವತ್ತು ಮುಖ್ಯಮಂತ್ರಿಯಾಗಿ ನನಗಿದ್ದ ಅಧಿಕಾರವನ್ನು ಚಲಾಯಿಸಿ ಕಾನೂನು ಬದ್ಧವಾಗಿಯೇ ಡಿ ನೋಟಿಫಿಕೇಶನ್ ಮಾಡಿದ್ದೇನೆ. ಹಾಗೆ ನೋಡಿದ್ರೆ ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಸ್ತಿಯೊಂದು ಕಾನೂನು ಬದ್ಧವಾಗಿದ್ದ ಕಾರಣ ಅವರಿಗೂ ನಾನು ಡಿ ನೋಟಿಫಿಕೇಶನ್ ಮಾಡಿದ್ದೇನೆ ಅಂದ್ರು.
Advertisement
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಜಾಯಮಾನ ನಮ್ಮದಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ನಮ್ಮಸರ್ಕಾರ ಅಧಿಕಾರಕ್ಕೆ ಬಂದಾಗ ಇದಕ್ಕೆಲ್ಲಾ ತಕ್ಕ ಉತ್ತರ ಕೊಡುತ್ತೇವೆ. ಅಮಿತ್ ಸ ರಾಜ್ಯಕ್ಕೆ ಬಂದು ಹೋದ ನಂತರ ಸಿದ್ದರಾಮಯ್ಯ ಗೆ ನಡುಕ ಶುರುವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಷ್ಟು ಯಾವುದಕ್ಕೆ ಖರ್ಚಾಗಿದೆ ಎಂಬುದನ್ನು ಸಿದ್ದರಾಮಯ್ಯ ಲೆಕ್ಕ ಕೊಡಲೇಬೇಕು. ಇವರ ನಡವಳಿಕೆ ಹೀಗೆ ಮುಂದುವರಿದ್ರೆ, ನಮ್ಮ ಕೇಂದ್ರ ಸಚಿವರು ಯಾರೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡದಂತೆ ನಾವು ಮನವಿ ಮಾಡಬೇಕಾಗುತ್ತದೆ. ಇದರಿಂದ ಅನಗತ್ಯವಾಗಿ ರಾಜ್ಯಕ್ಕೆ ತೊಂದರೆಯಾಗುತ್ತದೆ ಅಂತ ಹೇಳಿದ್ರು.