Connect with us

Chitradurga

6 ಬಾರಿ ಗೆದ್ರೂ ಸಚಿವ ಸ್ಥಾನ ನೀಡದಿರುವುದು ಆಘಾತವಾಗಿದೆ: ತಿಪ್ಪಾರೆಡ್ಡಿ

Published

on

– ಬೈಕಿಗೆ ಬೆಂಕಿ ಹಚ್ಚಿ ತಿಪ್ಪಾರೆಡ್ಡಿ ಬೆಂಬಲಿಗರ ಆಕ್ರೋಶ

ಚಿತ್ರದುರ್ಗ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ತಿಪ್ಪಾರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದವರೆಗೆ ಬೇರೂರಲು ಶಕ್ತಿಯಾಗಿದ್ದ ತಿಪ್ಪಾರೆಡ್ಡಿ ಬಿಜೆಪಿ ಹೈಕಮಾಂಡ್ ಹಾಗು ಯಡಿಯೂರಪ್ಪನವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪದೇ ಪದೇ ಈ ಜಿಲ್ಲೆಗೆ ವಲಸಿಗರೇ ಉಸ್ತುವಾರಿ ಸಚಿವರಾಗ್ತಿರೋದು ಚಿತ್ರದುರ್ಗದ ದೌರ್ಭಾಗ್ಯ ಎಂದಿದ್ದಾರೆ. ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಶಾಸಕರ ಭವನದಲ್ಲಿ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ನಾನು ಸುಮಾರು 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 6 ಬಾರಿ ಶಾಸಕನಾಗಿದ್ದೇನೆ. ಕಳೆದ 16-17 ವರ್ಷದಿಂದ ಹೊರಗಿನವರೇ ನಮ್ಮ ಜಿಲ್ಲೆಯ ಉಸ್ತವಾರಿ ಸಚಿವರಾಗುತ್ತಿರೋದು ದುರಂತ. ನಮ್ಮಲ್ಲಿ ಒಂದು ಅಭಿವೃದ್ಧಿ ಕೆಲಸ ಕೂಡ ಆಗಿರುವ ಉದಾಹರಣೆ ಇಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಯಾವುದೇ ಮೈನಸ್ ಪಾಯಿಂಟ್ ಇಲ್ಲ. ಯಾರೊಬ್ಬರು ಬೆರಳು ಮಾಡಿ ತೋರಿಸುವಂತ ಕೆಲಸ ಕೂಡ ನಾನು ಮಾಡಿಲ್ಲ. ನಿಷ್ಪಕ್ಷಪಾತವಾಗಿ ಪಕ್ಷದ ಸಂಘಟನೆಗೆ ನಾವು ದುಡಿದಿದ್ದೇವೆ. ಪಕ್ಷ ಸೋತಾಗಲೂ ಜಿಲ್ಲೆಯಲ್ಲಿ ನಾವು ಲೀಡ್ ಪಡೆದು ಗೆದ್ದಿದ್ದೇವೆ. ನಾವು ಆರು ಬಾರಿ ಗೆದ್ದು, ಜನರ ವಿಸ್ವಾಸ ಗಳಿಸಿ, ಜಿಲ್ಲೆಯ ಎಲ್ಲಾ ಜನಾಂಗಕ್ಕೆ ಭೇದ ಭಾವ ಮಾಡದೇ ಕೆಲಸ ಮಾಡಿದ್ದೇವೆ. ನಮಗೆ ಯಾವಾಗ ಅವಕಾಶ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬೇರೆಯವರ ಹಾಗೆ ಜನ ಕಟ್ಟಿಕೊಂಡು ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ. ಯಾಕೆಂದರೆ ನಾನು ವಯಸ್ಸಿನಲ್ಲಿ ಹಾಗೂ ಶಾಸಕರಲ್ಲಿ ಅತ್ಯಂತ ಹಿರಿಯ ನಾಯಕ. ಈ ರೀತಿ ಇರುವಾಗ ನಮಗೆ ಅವಕಾಶ ಕೊಡದಿರುವುದು ಬಹಳ ನೋವಿನ ಸಂಗತಿ. ಈ ವಿಚಾರದಲ್ಲಿ ನಮ್ಮ ಸಿಎಂ ಹಾಗೂ ಕೇಂದ್ರದ ನಾಯಕರಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಸದ್ಯದಲ್ಲೇ ಹಿರಿಯ ನಾಯಕರೆಲ್ಲ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಇಂದು ಪ್ರಮಾಣ ವಚನ ಸಮಾರಂಭಕ್ಕೆ ಹೋಗಬಾರದೆಂದು ನಾನು ನಿರ್ಧರಿಸಿದ್ದೆ. ಆದರೆ ನಮ್ಮ ಸ್ನೇಹಿತರು ಹಾಗೂ ಶಾಸಕರು ಕರೆ ಮಾಡಿ ಬರಲು ಹೇಳಿದ್ದಾರೆ, ಹೀಗಾಗಿ ಬೆಂಗಳೂರಿಗೆ ತೆರೆಳುತ್ತೇನೆ. ಅಲ್ಲಿ ರಾಜ್ಯದ ಅಭಿವೃದ್ಧಿಗೆ, ಪಕ್ಷಕ್ಕೆ ಅನುಕೂಲವಾಗುವ ರೀತಿ ಹೇಗೆ ನಮ್ಮ ನೋವನ್ನು ಹಿರಿಯ ನಾಯಕರಿಗೆ ತಿಳಿಸಬೇಕು ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ ಕೆಲ ಜನಾಂಗಕ್ಕೆ ಮಾನ್ಯತೆ ಕೊಡುತ್ತಿಲ್ಲ. ಹಿಂದಿನ ಕ್ಯಾಬಿನೆಟ್‍ನಲ್ಲಿ ಹಿಂದುಳಿದ ಜನಾಂಗದವರು ಕೆಲಸ ಮಾಡಿದ್ದಾರೆ. ಆದರೆ ಈಗ ಯಾವ ದೃಷ್ಟಿಯಿಂದ ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಗೊತ್ತಿಲ್ಲ. ನಾನು ಬೇರೆಯವರಿಗೆ ಸಚಿವ ಸ್ಥಾನ ಕೊಟ್ಟಿರುವ ಬಗ್ಗೆ ಟೀಕೆ ಮಾಡಲ್ಲ. ಆದರೆ ನನಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.

ಸಿಎಂ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಯಾವುದೇ ಮುನಿಸು, ದ್ವೇಷವಿಲ್ಲ. ಹಾಗೆಯೇ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಯಾರಾದರೂ ಕುತಂತ್ರ ನಡೆಸಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಕಳೆದ 4-5 ಸರ್ಕಾರದ ಬಂದ ಅವಧಿಯಲ್ಲೂ ನಮ್ಮ ಜಿಲ್ಲೆಯವರು ಸಚಿವರಾಗದಿರುವುದು ದುರಂತ. ಹೊಸ ಸರ್ಕಾರ ರಚನೆಯಾದಗಲೆಲ್ಲಾ 4ರಿಂದ 5 ಮಂದಿ ಸಚಿವರಾಗುತ್ತಾರೆ ಆದರೆ ಎಲ್ಲರೂ ಹೊರ ಜಿಲ್ಲೆಯವರು. ಹೀಗಾಗಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಯಾವೆಲ್ಲ ಹಿರಿಯ ಶಾಸಕರು ಸೇರಿ ಸಭೆ ನಡೆಸುತ್ತೇವೆ ಎಂದು ಮುಂದಿನ ದಿನಗಳಲ್ಲಿ ನಿಮಗೆ ತಿಳಿಯುತ್ತೆ. ಈಗಲೇ ಅದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಎಬಿವಿಪಿ, ಭಜರಂಗದಳ, ಹಿಂದೂ ಸಂಘಟನೆ, ಆರ್‍ಎಸ್‍ಎಸ್ ಹೀಗೆ ಹಲವು ಸಂಘಟನೆ ಜೊತೆ ಸಕ್ರಿಯವಾಗಿದ್ದೇನೆ. ಬಿಜೆಪಿಯ ಯಾವುದೇ ಕಾರ್ಯಾಕ್ರವಿದ್ದರೂ ಕ್ರಿಯಾಶೀಲವಾಗಿ ಭಾಗಿಯಾಗಿದ್ದೇನೆ. ಆದರೂ ಸಚಿವ ಸ್ಥಾನ ಸಿಗದೇ ಇರುವುದು ಅಘಾತವಾಗಿದೆ ಎಂದು ನೋವನ್ನು ಹಂಚಿಕೊಂಡರು.

ಇತ್ತ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಚಿತ್ರದುರ್ಗದ ಗಾಂಧಿಸರ್ಕಲ್‍ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹೀರೋ ಸ್ಕೂಟಿ ಬೈಕಿಗೆ ಬೆಂಕಿ ಹಚ್ಚಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ಡಾ.ಕೆ.ಅರುಣ್ ಹಾಗೂ ಇತರೆ ಪೊಲೀಸರು ಭೇಟಿ ನೀಡಿ, ಪ್ರತಿಭಟನಾ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪರಿಣಾಮ ದಿಕ್ಕಾಪಾಲಾಗಿ ಪ್ರತಿಭಟನಾಕಾರರು ಓಡಿಹೋಗಿದ್ದಾರೆ. ಅಲ್ಲದೆ ಮುಂಜಾಗೃತ ಕ್ರಮವಾಗಿ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕರಕಲಾದ ಸ್ಕೂಟಿಯನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ.

Click to comment

Leave a Reply

Your email address will not be published. Required fields are marked *