ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ

Public TV
4 Min Read
SIDDARAMAIAH 1

– ಕನ್ನಡದಲ್ಲೇ ವ್ಯವಹಾರ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಬೇಕು
– ನಾವು ತಮಿಳುನಾಡಿಗೆ ಹೋಗಿ ತಮಿಳು ಮಾತಾಡದೆ ಬದುಕಲು ಆಗಲ್ಲ

ಬೆಂಗಳೂರು: ಕೇಂದ್ರ ಸರ್ಕಾರ ಇಂದೂ ಇಂಗ್ಲಿಷ್, ಹಿಂದಿಯಲ್ಲಿಯೇ ಪರೀಕ್ಷೆಗಳನ್ನು ಮಾಡುತ್ತಿದೆ. ಇದನ್ನ ವಿರೋಧ ಮಾಡಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಬರುವ ಭಾಷೆಯಲ್ಲಿ ಪರೀಕ್ಷೆ ಮಾಡಬೇಕು. ಈ ಸಂಬಂಧ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ (Education Department) ಕನ್ನಡ ರಾಜ್ಯೋತ್ಸವ ಆಚರಣೆಯ ವೇಳೆ ಸಿಎಂ ಮಾತನಾಡಿದರು. 68ನೇ ಕನ್ನಡ ರಾಜ್ಯೋತ್ಸವವನ್ನ (Kannada Rajyotsava) ರಾಜ್ಯಾದ್ಯಂತ ಅಚರಣೆ ಮಾಡಲಾಗ್ತಿದೆ. ನವೆಂಬರ್ 1 ರಂದು ಸಂಭ್ರಮ, ಸಡಗರದಿಂದ ಇಡೀ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನ ಹೆಮ್ಮೆಯಿಂದ ದಿನಾಚರಣೆ ಮಾಡ್ತಿದ್ದೇವೆ ಎಂದರು.

ಕರ್ನಾಟಕ ಏಕೀಕರಣ ಆದಾಗ ಮೈಸೂರು ರಾಜ್ಯ ಅಂತ ಹೆಸರು ಇತ್ತು. 1973 ನವೆಂಬರ್ 1 ರಂದು ಕರ್ನಾಟಕ ಅಂತ ಅಂದಿನ ಸಿಎಂ ದೇವರಾಜ್ ಅರಸ್ ಅವರು ನಾಮಕರಣ ಮಾಡಿದ್ರು. ಕರ್ನಾಟಕ ಅಂತ ನಾಮಕರಣ ಆಗಿ 50 ವರ್ಷ ತುಂಬಿದೆ. ಇದರ ಸವಿ ನೆನಪಿಗಾಗಿ ಇಡೀ ರಾಜ್ಯದಲ್ಲಿ ಒಂದು ವರ್ಷ ಕರ್ನಾಟಕ ಸಂಭ್ರಮ 50 ಅಂತ ಆಚರಣೆ ಮಾಡಲಾಗ್ತಿದೆ. ಕನ್ನಡದ ಇತಿಹಾಸ, ಭಾಷೆ, ಕಲೆ, ಜಾನಪದ, ಸಂಗೀತ, ಸಂಸ್ಕøತಿ, ಸಂಪ್ರದಾಯ ಜನರಿಗೆ ತಿಳಿಸುವ ಕೆಲಸ ಮಾಡ್ತೀವಿ. ಇದಕ್ಕಾಗಿ ಒಂದು ಘೋಷವಾಕ್ಯ ತಂದಿದ್ದೇವೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಂತ ಘೋಷವಾಕ್ಯ ಇಟ್ಟಿದ್ದೇವೆ ಎಂದು ಹೇಳಿದರು.

kannada rajyostava

ಪ್ರತಿಜ್ಞೆ ಮಾಡಿ: ವಾಸ್ತವವಾಗಿ ಈ ವರ್ಷ 50ರ ಸಂಭ್ರಮ ಆಗಬೇಕಿತ್ತು. ಆದರೆ ಹಿಂದಿನ ಸರ್ಕಾರ ಆಚರಣೆ ಮಾಡಿರಲಿಲ್ಲ. ಹೀಗಾಗಿ ನಾನು ಬಜೆಟ್‍ನಲ್ಲಿ ಒಂದು ವರ್ಷ ಸಂಭ್ರಮ ಆಚರಣೆ ಮಾಡಲು ಘೋಷಣೆ ಮಾಡಿದ್ದೆ. ಅದರಂತೆ ಇಂದಿನಿಂದ ಒಂದು ವರ್ಷ ಕಾರ್ಯಕ್ರಮ ಮಾಡ್ತೀವಿ. ನಾವೆಲ್ಲರೂ ಕೂಡ ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಬೇಕು. ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಬಳಸಲ್ಲ ಅಂತ ಪ್ರತಿಜ್ಞೆ ಮಾಡಬೇಕು. ನಮ್ಮ ಭಾಷೆ, ಸಂಸ್ಕೃತಿ, ಕಲೆ ಬಗ್ಗೆ ನಾವು ಅಭಿಮಾನ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಕನ್ನಡಿಗ (Kannadiga) ಇದು ತಾಯಿನಾಡು, ತಾಯಿ ಭಾಷೆ ಅಂತ ಎತ್ತಿಹಿಡಿಯಬೇಕು. ಪ್ರತಿಯೊಬ್ಬ ಕನ್ನಡಿಗ ಈ ಪ್ರತಿಜ್ಞೆ ಮಾಡಬೇಕು ಎಂದು ಸಿಎಂ ಸೂಚಿಸಿದರು. ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌, ಕುಡಿಯುವ ನೀರು: ಸಿಎಂ ಘೋಷಣೆ

ಕನ್ನಡದಲ್ಲೇ ಮಾತಾಡಿ: ಅಭಿಮಾನ ಶೂನ್ಯರು ಅಂತ ನಾವು ಹೇಳಲ್ಲ. ಬೇರೆ ರಾಜ್ಯಗಳಂತೆ ಅಷ್ಟೊಂದು ಅಭಿಮಾನ ಇಲ್ಲ. ವಾಸ ಮಾಡೋ ಪ್ರತಿಯೊಬ್ಬ ಕನ್ನಡದಲ್ಲಿ ಮಾತಾಡೋದು ಕಲಿಯಬೇಕು. ಎಲ್ಲರ ಜವಾಬ್ದಾರಿ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕು. ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಅಧಿಕೃತ ಭಾಷೆ ಮಾತಾಡ್ತಾರೆ. ನಾವು ತಮಿಳುನಾಡಿಗೆ ಹೋಗಿ ತಮಿಳು ಮಾತಾಡದೆ ಬದುಕಲು ಆಗಲ್ಲ. ಕರ್ನಾಟಕದಲ್ಲಿ ತಮಿಳು, ತೆಲುಗು ಭಾಷೆ ಮಾತಾಡಿ ಬದುಕಬಹುದು. ಯಾವ ಭಾಷೆ ಬೇಕಾದರೂ ಕಲೀರಿ. ಆದರೆ ಕನ್ನಡದಲ್ಲಿ ಮಾತಾಡಿ. ಕನ್ನಡ ಭಾಷೆ ನಮ್ಮ ಸಾರ್ವಭೌಮ ಭಾಷೆ. ಕನ್ನಡವನ್ನು ಸರ್ಕಾರದ ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದೇವೆ. ಸರ್ಕಾರದ ವ್ಯವಹಾರಗಳು ಕನ್ನಡದಲ್ಲಿ ಆಗಬೇಕು ಅಂತ ಆದೇಶ ಮಾಡಲಾಗಿದೆ ಎಂದು ಹೇಳಿದರು.

kannada rajyotsava

ಕನ್ನಡದಲ್ಲೇ ವ್ಯವಹರಿಸಿ: ಕನ್ನಡ ಆಡಳಿತ ಭಾಷೆ ಆಗಬೇಕು. ಕನ್ನಡಿಗರ ಭಾಷೆಗೆ ಗೌರವ ಕೊಡಬೇಕು. ನಮ್ಮ ಆಡಳಿತ ಪರಿಣಾಮಕಾರಿಯಾಗಿ ಮುಟ್ಟಬೇಕಾದ್ರೆ ಕನ್ನಡ ಭಾಷೆಯಲ್ಲಿ ಆಡಳಿತ ಇರಬೇಕು. ನಮ್ಮ ಕಾರ್ಯಕ್ರಮ ಜನರಿಗೆ ತಲುಪಿಸಲು ಕನ್ನಡ ಮುಖ್ಯವಾಗಿದೆ. ಅಧಿಕಾರಿಗಳು, ಜನರು ಕನ್ನಡದಲ್ಲಿ ವ್ಯವಹಾರ ಮಾಡೋ ಕೆಲಸ ಮಾಡಬೇಕು. ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳಲ್ಲಿ ಮನವಿ ಮಾಡ್ತೀವಿ. ಕನ್ನಡದಲ್ಲಿ ವ್ಯವಹಾರ ಮಾಡಬೇಕು ಎಂದು ತಿಳಿಸಿದರು.

ಈ ಕಲ್ಪನೆ ಬಿಡಿ: ಇತ್ತೀಚೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿಯೋ ಪ್ರೀತಿ ಕಡಿಮೆ ಆಗ್ತಿದೆ. ಇಂಗ್ಲೀಷ್ ಮಾಧ್ಯಮಗಳ ಮೇಲಿನ ವ್ಯಾಮೋಹ ಜಾಸ್ತಿ ಆಗ್ತಿದೆ. ಕನ್ನಡ ಶಾಲೆಯಲ್ಲಿ ಓದಿದರೆ ಕೆಲಸ ಸಿಗೊಲ್ಲ ಅನ್ನೋ ಕಲ್ಪನೆ ಇದೆ. ಈ ಕಲ್ಪನೆ ಬಿಡಬೇಕು. ಕನ್ನಡ ಮಾಧ್ಯಮಗಳಲ್ಲಿ ಕಲಿಯೋ ಕೆಲಸ ಆಗಬೇಕು. ನಮ್ಮ ಪ್ರಯತ್ನಕ್ಕೆ ಕೋರ್ಟ್ ಗಳು ಸಹಕಾರ ಮಾಡ್ತಿಲ್ಲ. ತಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಅಂತ ಪೋಷಕರು ನಿರ್ಧಾರ ಮಾಡಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ನಮ್ಮ ಪ್ರಯತ್ನಕ್ಕೆ ಹಿನ್ನಡೆ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

KANNADA RAJYOTSAVA 1

ಹೊಸ ಕಾರ್ಯಕ್ರಮಗಳ ಜಾರಿ: ನಮ್ಮ ಸರ್ಕಾರ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆಯಲ್ಲಿ 80 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 1 ಕೋಟಿಗೂ ಹೆಚ್ಚು ಕುಟುಂಬಕ್ಕೆ ಹಣ ಕೊಡ್ತಿದ್ದೇವೆ. 1 ಕೋಟಿಗೂ ಹೆಚ್ಚು ಮನೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. 1 ಕೋಟಿ 7 ಲಕ್ಷ ಮನೆ ಯಜಮಾನಿಗೆ 2 ಸಾವಿರ ಕೊಡ್ತಿದ್ದೇವೆ. ಸಮೃದ್ಧ ಕರ್ನಾಟಕ ಮಾಡಲು ಗ್ಯಾರಂಟಿ ಕೊಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ಹಾಲು ಕೊಡುವ ಕೆಲಸ ಆಗ್ತಿದೆ. ಸರ್ಕಾರ ಎಲ್ಲಾ ಕನ್ನಡಿಗರನ್ನ ಆರ್ಥಿಕವಾಗಿ, ಸಾಮಾಜಿಕ ಸದೃಢ ಮಾಡುವ ಕೆಲಸ ಮಾಡ್ತಿದೆ. ಕನ್ನಡಿಗರು ಸ್ವಾಭಿಮಾನವಾಗಿ ಬದುಕೋ ಕೆಲಸ ಮಾಡೋಣ. ಈ ನಿಟ್ಟಿನಲ್ಲಿ ಹೊಸ ಹೊಸ ಕಾರ್ಯಕ್ರಮ ಜಾರಿ ಮಾಡ್ತೀವಿ ಎಂದು ಸಿಎಂ ಘೋಷಿಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article