ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಜನರ ತೀರ್ಪನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ (BJP) ಈ ಸೋಲಿನ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.
ಶನಿವಾರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಇದರ ಬೆನ್ನಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾತ್ರಿ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಕಳೆದ ಬಾರಿ ನಮಗೆ 104 ಸೀಟು ಬಂದಿತ್ತು. ಈ ಬಾರಿ ಪರ್ಸೆಂಟೇಜ್ ಜಾಸ್ತಿ ಬಂದಿದ್ದರೂ ಕಡಿಮೆ ಸೀಟು ಬಂದಿವೆ. ಏನೇ ಆಗಲಿ ಸೋಲು ಸೋಲೇ. ನಾವು ಇದರ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ. ಎಲ್ಲಿ ತಪ್ಪು ಆಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೊಮ್ಮಾಯಿ
ನಮ್ಮದು ಒಂದು ರಾಷ್ಟ್ರೀಯ ಪಕ್ಷ. ನಾವು ಕೇವಲ ಚುನಾವಣೆಗೆ ಮಾತ್ರ ಕೆಲಸ ಮಾಡಲ್ಲ. ರಾಷ್ಟ್ರದ ನಿರ್ಮಾಣಕ್ಕೆ ಕೆಲಸ ಮಾಡೋರು. ಇನ್ನೇನು ಕೇವಲ 8-10 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆ ಚುನಾವಣೆಗೆ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ LIVE Updates