ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ (WPL 2023) ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ತನ್ನನ್ನು ತಾನೇ ಟೀಕಿಸಿಕೊಂಡಿದ್ದಾರೆ.
ಲೀಗ್ ಸುತ್ತಿನಲ್ಲಿ ಆಡಿರುವ 4 ಪಂದ್ಯಗಳಲ್ಲೂ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಆ ಮೂಲಕ ಮುಂದಿನ ಹಂತದ ಹಾದಿಯನ್ನು ಕಠಿಣವಾಗಿಸಿಕೊಂಡಿದೆ. ಜೊತೆಗೆ ಆರ್‌ಸಿಬಿ ಅಭಿಮಾನಿಗಳಲ್ಲೂ ನಿರಾಸೆ ಉಂಟುಮಾಡಿದೆ. ಇದನ್ನೂ ಓದಿ: 4ನೇ ಪಂದ್ಯದಲ್ಲೂ RCBಗೆ ಹೀನಾಯ ಸೋಲು; ಹೀಲಿ ಸ್ಫೋಟಕ ಬ್ಯಾಟಿಂಗ್ – ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ
ಡಬ್ಲ್ಯೂಪಿಎಲ್‌ನಲ್ಲಿ 3.4 ಕೋಟಿ ದುಬಾರಿ ಬೆಲೆಗೆ ಆರ್‌ಸಿಬಿ ತಂಡಕ್ಕೆ ಬಿಕರಿಯಾದ ಸ್ಮೃತಿ ಮಂದಾನ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 35, 23, 18 ಹಾಗೂ 4 ರನ್ ಗಳಿಸಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: IPL 2023: ಮಾಸ್ ಲುಕ್‌ನಲ್ಲಿ ಹಾಲಿ ಚಾಂಪಿಯನ್ಸ್ – ಮುಂಬೈ, ಟೈಟಾನ್ಸ್ ಹೊಸ ಜೆರ್ಸಿ ಅನಾವರಣ
ಯುಪಿ ವಾರಿಯರ್ಸ್ ವಿರುದ್ಧ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಂದಾನ, ತಮ್ಮನ್ನೇ ದೂಷಿಸಿಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ರನ್ ಹೊಳೆ ಹರಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಸಹಕಾರಿ ಆಗಬೇಕು. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಲಾಗಿದೆ. ಹಾಗಾಗಿ ದೊಡ್ಡ ಮೊತ್ತವಾಗಿ ಪರಿವರ್ತನೆ ಮಾಡುವಲ್ಲಿ ಎಡವಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ನಾನು ಈ ಸೋಲಿನ ಹೊಣೆ ಹೊರುತ್ತೇನೆ’ ಎಂದು ಬೇಸರ ಹೊರಹಾಕಿದ್ದಾರೆ.
ಆರ್‌ಸಿಬಿ ನೀಡಿದ 139 ರನ್ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ಪರ ನಾಯಕಿ ಅಲಿಸಾ ಹೀಲಿ 96 ರನ್ ಹಾಗೂ ದೇವಿಕಾ ವೈದ್ಯ 36 ರನ್ ಗಳಿಸಿದರು. ಇಬ್ಬರ ಸ್ಫೋಟಕ ಆಟದಿಂದಾಗಿ 13 ಓವರ್‌ಗಳಲ್ಲೇ ಗುರಿ ತಲುಪಿ ವಾರಿಯರ್ಸ್ ತಂಡ ಸಂಭ್ರಮಿಸಿತು. ಆ ಮೂಲಕ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಸ್ಮೃತಿ ಮಂದಾನ ಪಡೆ ತನ್ನ 2ನೇ ಸುತ್ತಿನ ಮೊದಲ ಪಂದ್ಯವನ್ನು ಮಾರ್ಚ್ 13 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ ಆರಂಭಿಸಲಿದ್ದು, ಮಾರ್ಚ್ 15 ರಂದು ಯುಪಿ ವಾರಿಯರ್ಸ್ ವಿರುದ್ಧ ಮತ್ತೊಮ್ಮೆ ಸೆಣಸಲಿದೆ.