ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಬಳಿಕ ತಮ್ಮ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಮುಂದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಲಿರುವ ಅವರು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ 2019 ರ ವಿಶ್ವಕಪ್ ವೇಳೆವರೆಗೂ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದು ಬಳಿಕ ನಿವೃತ್ತಿಯ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದರು.
Advertisement
ಯುವರಾಜ್ ಸಿಂಗ್ 2017 ಜೂನ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.
Advertisement
ಇದೇ ವೇಳೆ ಆಫ್ರಿಕಾ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಮುಂಬರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಪಡೆಯಲು ಕೊಹ್ಲಿ ಗಮನ ಹರಿಸಬೇಕಿದೆ. ತಂಡದ ಪ್ರತಿಯೊಬ್ಬ ಆಟಗಾರರು ಸ್ಥಿರ ಪ್ರದರ್ಶನ ನೀಡಬೇಕಿದೆ ಎಂದರು.