ಶಿವಮೊಗ್ಗ: ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಈ ವ್ಯವಸ್ಥೆಯಿಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಮಂಡಲ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ, ರಾಜ್ಯಾಧ್ಯಕ್ಷರ ಚುನಾವಣೆ ಮತ್ತು ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವೂ ಕೂಡ ವ್ಯವಸ್ಥಿತವಾಗಿ ನಡೆಯುತ್ತಿವೆ. ಕೇಂದ್ರದ ವರಿಷ್ಠರು ನಿರ್ಧಾರ ಮಾಡಿದಂತೆ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದರು.ಇದನ್ನೂ ಓದಿ: ಫ್ರೀಯಾಗಿ ಸಿಗರೇಟ್ ನೀಡದ್ದಕ್ಕೆ ಬೇಕರಿ ಮಾಲೀಕನ ಮೇಲೆಯೇ ಹಲ್ಲೆ
ಯತ್ನಾಳ್ ಬಣದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ಬಣ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸುವ ತಯಾರಿ ನಡೆಸಿದೆ ಎಂದರು.
ಇದೇ ವೇಳೆ ಪಕ್ಷದ ಸಂಘಟನಾತ್ಮಕ ಚುನಾವಣೆಯ ಕುರಿತು ಮಾಹಿತಿ ಹಂಚಿಕೊಂಡು, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಎಲ್ಲಾ ಕಾರ್ಯಕರ್ತರು, ಪಕ್ಷದ ಹಿರಿಯರು ಒಟ್ಟಾಗಿ ಈ ಭ್ರಷ್ಟ ಹಾಗೂ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿಯಲ್ಲಿ, ರಾಜ್ಯಾಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ರಾಜ್ಯದ ಜನತೆಗೂ ಗೊತ್ತಿದೆ, ನಮ್ಮ ಕಾರ್ಯಕರ್ತರಿಗೂ ಗೊತ್ತಿದೆ. ಪಕ್ಷದ ಹಿರಿಯರು, ಶಾಸಕರಿಗೂ ಕೂಡ ಗೊತ್ತಿದೆ. ಎಲ್ಲರ ಸಹಕಾರದಿಂದ ರಾಜ್ಯಾಧ್ಯಕ್ಷನಾಗಿ ಮುಂದುವರಿದು ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೆಂಗಳೂರು: ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಡಿಎಲ್ ಅಮಾನತು!