ಚೆನ್ನೈ: ನನ್ನ ವಿರುದ್ಧ ಶೀರೂರು ಶ್ರೀಗಳು ಮಾಡಿದ್ದಾರೆ ಎನ್ನಲಾದ ಆರೋಪ ಸಾಬೀತಾದರೆ ನಾನು ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಾನು ಯಾವುದೇ ಪರೀಕ್ಷೆ ಅಥವಾ ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಶೀರೂರು ಶ್ರೀಗಳ ಸಾವಿನ ಬಳಿಕ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಇದರಲ್ಲಿ ಪೇಜಾವರ ಶ್ರೀಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ವಾಟ್ಸಪ್ ಆಡಿಯೋ ಕೂಡಾ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಪೇಜಾವರಶ್ರೀಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪೇಜಾವರ ಶ್ರೀಗಳ ಹೇಳಿಕೆಯಲ್ಲೇನಿದೆ..?: ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಒಂದು ಪುಟದ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.
Advertisement
ಶೀರೂರು ಮಠದ ಗತಿಸಿದ ಶ್ರೀ ಲಕ್ಷ್ಮೀವರತೀರ್ಥರ ಆಪ್ತವರ್ಗವು ಬಹಿರಂಗಗೊಳಿಸಿದ ಆಡಿಯೋದಲ್ಲಿ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧ ಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್‍ನಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡು ಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದ ಇದು ಕಲ್ಪನೆಯೆಂದು ಗೊತ್ತಾಗುತ್ತದೆ. ಇದನ್ನು ನಮ್ಮ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ಯಾವ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ.
Advertisement
Advertisement
ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುವೆನು. ಲಕ್ಷೀವರ ತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ಸರಿಯಿಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷೀವರತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ, ಆಕ್ಷೇಪವನ್ನು ಮಾದ್ಯಮದವರು ಮಾಡಿದ್ದರಿಂದ ಅದಕ್ಕೆ ಉತ್ತರವಾಗಿ ಅವರು ಸನ್ಯಾಸಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ಅನಿವಾರ್ಯವಾಗಿ ನಾನು ವಿವರಿಸ ಬೇಕಾಯಿತು.
Advertisement
ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರು, ಹಿಂದಿನ ಶೀರೂರು ಸ್ವಾಮಿಗಳಾದ ಮನೋಜ್ಞ ತೀರ್ಥರು, ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನೂ ಇಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ. ಅವರಾಗಿ ಸ್ವೇಚ್ಛೆಯಿಂದ ಹೋಗಿದ್ದಾರೆ. ಅದಕ್ಕಾಗಿ ನನ್ನನ್ನು ಹಂತಕನನ್ನಾಗಿ ದೂಷಿಸುವುದು ಸರ್ವಥಾ ತಪ್ಪು. ರಘುವಲ್ಲಭರಿಗೆ 5 ಲಕ್ಷ ರೂ. ಕೊಟ್ಟಿರುವೆನೆಂದು ಆರೋಪಿಸುವುದೂ ಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆ ಕೂಡ ಕೊಟ್ಟಿಲ್ಲ. ವಿಶ್ವ ವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು. ಹೋದರೆ ಅನೇಕ ಸಮಸ್ಯೆಯಾಗುವುದೆಂದು ನಾನು ಹೇಳಿದ್ದೆ. ಆದರೂ ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿಯೂ ಹೇಳಿದೆ. ಆದರೆ ಅವರು ನನಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ. ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರರ ಆಶ್ರಮ ಸ್ವೀಕಾರ ಮತ್ತು ಪೀಠ ತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತು ಇಲ್ಲ. ಆದರೂ ಇದೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಾಥಾ ಸರಿಯಲ್ಲ. ಶೀರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಲೂ ಇಲ್ಲ, ಕೇಳಲೂ ಇಲ್ಲ. ಇದೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ.
ಡಿವಿಆರ್ ಎಲ್ಲಿ?: ಇನ್ನು ಶೀರೂರು ಶ್ರೀಗಳು ನೆಲೆಸಿದ್ದ ಮೂಲಮಠದ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ನಿಗೂಢವಾಗುತ್ತಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಡಿವಿಆರ್ ನಾಪತ್ತೆಯಾಗಿದೆ. ಅಷ್ಟೇ ಅಲ್ಲ ಶೀರೂರು ಮೂಲಮಠದಿಂದ ಇನ್ನು ಕೆಲ ವಸ್ತುಗಳು ಕಾಣೆಯಾಗಿವೆ. ಉದ್ದೇಶಪೂರ್ವಕವಾಗಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರಾ ಅಥವಾ ಸಿಸಿಟಿವಿ ಬರಿ ಪ್ರದರ್ಶನಕ್ಕೆ ಮಾತ್ರ ಅಳವಡಿಸಲಾಗಿತ್ತಾ ಎಂಬುವುದರ ಕುರಿತು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಇದೇ ವೇಳೆ ಇನ್ನೆರಡು ದಿನಗಳಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈ ನಡುವೆ ಪಟ್ಟದ ದೇವರ ವಾಪಸ್ ಗಾಗಿ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಸ್ವಾಮೀಜಿಗಳ ಸಾವಿನಿಂದಾಗಿ ಅನೂರ್ಜಿತವಾಗಿದೆ. ಹೀಗಾಗಿ ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್ ಸಿಕ್ಕಿದೆ.