ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ಸಿಎಂ ಕುಮಾರಸ್ವಾಮಿ ಈ ಬಾರಿ ಕೈ ಬಿಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪರೋಕ್ಷವಾಗಿ ಟಿಪ್ಪು ಜಯಂತಿಯನ್ನು ಕೈಬಿಡಿ ಎಂದು ಮನವಿ ಮಾಡಿದ ಬೆನ್ನಲ್ಲೇ ಕುಮಾರಸ್ವಾಮಿ ಶಾಂತಿ ಕದಡುವ ಯಾವುದೇ ಜಯಂತಿಯನ್ನು ಆಚರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ಈ ಪ್ರಶ್ನೆ ಈಗ ಎದ್ದಿದೆ.
ಮಾಧ್ಯಮಗಳು ಟಿಪ್ಪು ಜಯಂತಿಯನ್ನು ಈ ಬಾರಿ ಸರ್ಕಾರ ಕೈ ಬಿಡುತ್ತಾ ಎನ್ನುವ ಪ್ರಶ್ನೆಗೆ ಸಿಎಂ, ರಾಜ್ಯದ ಶಾಂತಿ ಕದಡುವ ಯಾವುದೇ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ. ಈಗ ದಸರಾ ಸಂಭ್ರಮದಲ್ಲಿ ಇದ್ದೇವೆ. ವಿವಾದಾತ್ಮಕ ವಿಚಾರಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಜಯಂತಿ ಕುರಿತು ಯೋಚನೆ ಮಾಡಲಾಗುತ್ತದೆ ಎಂದು ಉತ್ತರಿಸಿದ್ದಾರೆ. ಆದರೆ ಎಲ್ಲಿಯೂ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡುತ್ತೇವೆ ಎಂದು ನೇರವಾಗಿ ಹೇಳಿಲ್ಲ.
ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮಹಿಷಾ ದಸರಾ ಆಚರಿಸುವುದನ್ನು ತಡೆಯಬೇಕು. ಇಂತಹ ಆಚರಣೆಯಿಂದಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದರ ಜೊತೆಯಲ್ಲಿ ಮೈಸೂರು ರಾಜವಂಶಸ್ಥರಿಗೆ ಕಿರುಕುಳ ನೀಡಿದ ವ್ಯಕ್ತಿಯ ಜಯಂತಿ ಮಾಡುವುದನ್ನು ನಿಲ್ಲಿಸಿ ಎಂದು ಟಿಪ್ಪು ಹೆಸರನ್ನು ಹೇಳದೇ ಟಿಪ್ಪು ಜಯಂತಿಯನ್ನು ರದ್ದು ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದರು.
ಟಿಪ್ಪು ಜಯಂತಿ ವಿವಾದ:
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2015 ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಅಷ್ಟೇ ಅಲ್ಲದೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲು ಪ್ರತಿ ಜಿಲ್ಲೆಗೆ 50 ಸಾವಿರ ರೂ. ಹಾಗೂ ಪ್ರತಿ ತಾಲೂಕಿಗೆ 25 ಸಾವಿರ ರೂ. ಹಣವನ್ನು ನೀಡಿತ್ತು. ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದರೂ, ಸಿದ್ದರಾಮಯ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv