ಚಿಕ್ಕಮಗಳೂರು: ಬೆಳಗಾವಿಯಲ್ಲಿ ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಎಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ. ಹರಕೆ ತೀರಿಸಲು ಅಲ್ಲಿಗೆ ಹೋಗುತ್ತೇನೆ. ಇನ್ನೂ ಧರ್ಮಸ್ಥಳಕ್ಕೂ ಹೋಗುತ್ತೇನೆ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಅವರು ನನಗೆ ಆಕ್ಷೇಪಾರ್ಹ ಶಬ್ದ ಬಳಸಿಲ್ಲ ಎನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ (akshmi Hebbalkar) ಹಾಕಿದ್ದ ಸವಾಲಿಗೆ ತಿರುಗೇಟು ನೀಡಿದ್ದಾರೆ. ಇನ್ನೂ ಇದೇ ವೇಳೆ, ಸದನದಲ್ಲಿ ನಡೆದ ಘಟನೆಯ ವೇಳೆ ಹಾಗೂ ಸಿಸಿಟಿವಿ ವಿಡಿಯೋ ಎಲ್ಲಾ ಇದೆ. ಹಲ್ಲೆ ಮಾಡಿದವರು ಯಾರು ಅಪರಿಚಿತರಲ್ಲ. ಎಲ್ಲರೂ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಅವರ ಜೊತೆಗೆ ಇದ್ದವರೇ ಹಲ್ಲೆ ಮಾಡಿದ್ದು. ನಾನು ಕಳೆದ 19ರಂದು ದೂರು ನೀಡಿದ್ದೇನೆ. ಈವರೆಗೂ ಎಫ್ಐಆರ್ ಆಗಿಲ್ಲ ಎಂದರೆ ಕಮಿಷನರ್ ಅಮಾನತ್ತಾಗಬೇಕು ಎಂದು ಕಿಡಿಕಾರಿದ್ದಾರೆ.
ಸೆಕ್ಷನ್ 135 (A) ಶಾಸಕರಿಗೆ ವಿಶೇಷ ಸವಲತ್ತಿದೆ. ಆದರೆ, ಯಾವುದೇ ನೋಟಿಸ್ ಕೊಡದೆ ಬೆಳಗಾವಿ ಧಾರವಾಡ ಹುಬ್ಬಳ್ಳಿ ಸೇರಿದಂತೆ ಸುಮಾರು 400 ಕಿ.ಮೀ ನನ್ನನ್ನು ಸುಖಾ ಸುಮ್ಮನೆ ಸುತ್ತಿಸಿದ್ದಾರೆ. ಊಟ, ನೀರು, ಚಿಕಿತ್ಸೆ ಕೊಡದೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಖಾನಾಪುರ ಸಿಪಿಐ ಅಮಾನತು ವಿಚಾರವಾಗಿ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಅಮಾನತು ಮಾಡಬೇಕಾಗಿರೋದು ಶಾರೀರಿಕ ಹಾಗೂ ಮಾನಸಿಕ ದೌರ್ಜನ್ಯ ಮಾಡಿದವರನ್ನು. ಪೊಲೀಸ್ ಠಾಣೆಯಲ್ಲಿ ಯಾವುದೇ ಬಿಜೆಪಿಯ ಸಭೆ ನಡೆದಿಲ್ಲ. ಘಟನೆಯ ಬಳಿಕ ಠಾಣೆಗೆ ಆಗಮಿಸಿದ್ದು ಬಿಜೆಪಿ (BJP) ನಾಯಕರು ಹಾಗೂ ಮುಖಂಡರು ಇದ್ದರು. ಅಲ್ಲಿ ಕಮಿಷನರ್ ಹಾಗೂ ವಿಪಕ್ಷ ನಾಯಕರು, ಶಾಸಕರು ಬಂದಿದ್ದರು. ಅದನ್ನ ಬಿಜೆಪಿ ಸಭೆ ಅನ್ನೋದು ಪೂರ್ವಗ್ರಹ ಪೀಡಿತ ಮನಸ್ಥಿತಿ ಅಷ್ಟೇ. ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿರುವುದು ಸರಿಯಲ್ಲ. ನಿಜವಾಗಿಯೂ ಕ್ರಮ ಆಗಬೇಕಿರೋದು ಎಸ್‌ಪಿ ಹಾಗೂ ಕಮಿಷನರ್ ಮೇಲೆ ಎಂದಿದ್ದಾರೆ.
ಬೆಳಗಾವಿ ಘಟನೆ ಜಾತಿ ಸಂಘರ್ಷಕ್ಕೆ ತಿರುಗಿದೆ ಎಂಬ ಪ್ರಶ್ನೆಗೆ, ನಾನು ಹಿಂದುತ್ವವಾದಿ ಹಿಂದುತ್ವಕ್ಕಾಗಿಯೇ ಬಂದವನು. ಜಾತಿ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದಿದ್ದಾರೆ.