ಚಿಕ್ಕಬಳ್ಳಾಪುರ: ವೀರ ಸಾವರ್ಕರ್ ಅವರು ಸ್ವಾತಂತ್ರಕ್ಕಾಗಿ ಆದರ್ಶದ ಹೋರಾಟ ಮಾಡಿದ್ದಾರೆ ಎಂಬುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇದರಲ್ಲಿ ಭಿನ್ನಾಭಿಪ್ರಾಯ ಇದ್ದರೆ, ಅಂತಹವರು ಸ್ವಾತಂತ್ರ್ಯದ ಇತಿಹಾಸ ತಿಳಿದಿರಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರದ ಇತಿಹಾಸ ಮತ್ತು ಸಾವರ್ಕರ್ ಅವರ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಅಂತಹವರಿಗೆ ನನ್ನ ಪ್ರಾಯೋಜಕತ್ವದಲ್ಲಿ ಸಾವರ್ಕರ್ ಅವರ ಬದುಕಿನ ಕುರಿತು ಇರುವ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವುಗಳನ್ನು ಓದಿದ ನಂತರ ಮಾತನಾಡಲಿ, ಅಜ್ಞಾನದಿಂದ ಮಾತನಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪತ್ನಿ ಜೊತೆಗೆ ದೇವಾಲಯಕ್ಕೆ ರಿಷಿ ಸುನಕ್ ಭೇಟಿ
ಅಜ್ಞಾನದಿಂದ ಮಾತನಾಡುವುದರಿಂದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಕಡಿಮೆ ಮಾಡುವುದು ಆಗಬಾರದು. ಇತಿಹಾಸ ಸಂಪೂರ್ಣ ಅರಿತು ಮಾತನಾಡುವ ಕೆಲಸವಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮುಗಿಸಲಾಗುವುದು- ಎನ್‍ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ
ಇದೇ ವೇಳೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ಮೊಟ್ಟೆ ಎಸೆದಿರುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸೂಕ್ತ ವೇದಿಕೆ ಇದೆ. ಹೋರಾಟಕ್ಕೂ ಅವಕಾಶ ಇದೆ, ಸಂವಿಧಾನವೂ ಕಲ್ಪಿಸಿದೆ, ಪ್ರಜಾಪ್ರಭುತ್ವ ನೀತಿಯೂ ಅದೇ ಆಗಿದೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ನಡೆದ ಈ ಘಟನೆಯನ್ನು ಖಂಡಿಸುತ್ತೇನೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಕೂಡ ಖಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.