ಬೆಂಗಳೂರು: ನಮ್ಮ ಪಕ್ಷದ ಆಧಾರ ಸ್ಥಂಭಗಳೇ ನಿಷ್ಠಾವಂತ ಕಾರ್ಯಕರ್ತರುಗಳು. ರಾಮನಗರ ಜಿಲ್ಲೆ ನಮಗೆ ರಾಜಕೀಯ ಜೀವನ ನೀಡಿದೆ. ನನ್ನ ಜೀವನವೇ ಹೋರಾಟ, ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸವನ್ನು ಹೊಂದಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭಿಪ್ರಾಯ ಪಟ್ಟಿದ್ದಾರೆ.
ಬಿಡದಿಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. 2019 ರಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವವರ ಬಗ್ಗೆ ನಾನು ಎಂದಿಗೂ ಹಗುರವಾಗಿ ಮಾತನಾಡಿಲ್ಲ. ನಾನು ಯುವಕನಾಗಿದ್ದೇನೆ. ಯುವ ಸಮುದಾಯದ ಪೀಳಿಗೆಗೆ ನನ್ನದೇ ಆದ ಕೊಡುಗೆ ನೀಡಬೇಕೆನ್ನುವುದು ನನ್ನ ಆಶಯ ಎಂದು ತಿಳಿಸಿದರು. ಇದನ್ನೂ ಓದಿ: ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ: ಈಶ್ವರ್ ಖಂಡ್ರೆ
ಸೋತಿದ್ದೀನಿ ಅಷ್ಟೇ, ಸತ್ತಿಲ್ಲ
ನಾನು ಭಾವನಾತ್ಮಕ ಮನುಷ್ಯ. ಕುಮಾರಣ್ಣ ರೀತಿ ನಾನು ಜನರೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದೇನೆ. ನಾವು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಬೇಕು. ನನಗೆ ಕೇವಲ 36 ವರ್ಷ. ನನಗಿದು ಚಿಕ್ಕ ವಯಸ್ಸು. ದಯವಿಟ್ಟು ನನ್ನನ್ನು ಬಳಸಿಕೊಳ್ಳಿ, ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ನಿಖಿಲ್ ತಿಳಿಸಿದರು.
ರಾಮನಗರ ಜಿಲ್ಲೆಯು ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ, ಮೂರು ಬಾರಿ ಕುಮಾರಣ್ಣ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದೀರಾ. ಚುನಾವಣೆಯಲ್ಲಿ ಏಳು-ಬೀಳು ಸರ್ವೆ ಸಾಮಾನ್ಯ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ
ಸಭೆಗೂ ಮುನ್ನ ತಂಬಾಕು ಬೆಳೆಯುವ ರೈತರ ಜತೆ ಸಭೆ ನಡೆಸಿದರು. ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ತಂಬಾಕು ಬೆಳೆದ ರೈತರು ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸೂಕ್ತ ಬೆಂಬಲ ಕೊಡಿಸಿ ಎಂದು ಕೇಂದ್ರ ಸಚಿವರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ತಂಬಾಕು ಬೆಳೆಗಾರರಿಗೆ ಭರವಸೆ
ತಂಬಾಕು ಬೆಳೆಗಾರರು ಕಡಿಮೆ ದರ್ಜೆಯ ತಂಬಾಕಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗ್ತಿಲ್ಲ ಮತ್ತು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದಕ್ಷಿಣ ಕರ್ನಾಟಕದ ಅದರಲ್ಲೂ ಹಳೆ ಮೈಸೂರು ಭಾಗದ ಬಹುತೇಕ ತಂಬಾಕು ಬೆಳೆದ ರೈತರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಕೇಂದ್ರ ಸಚಿವರು ಕುಮಾರಣ್ಣ ಅವರಿಗೆ ಭರವಸೆ ನೀಡಿದ್ದಾರೆ ಎಂದರು.
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
ನಾನು ಶಾಸಕನಾಗಬೇಕು ಎನ್ನುವುದು ನನ್ನ ಮುಂದೆ ಇರುವ ಪ್ರಶ್ನೆ ಅಲ್ಲ. ಪ್ರಾದೇಶಿಕ ಪಕ್ಷ ಉಳಿಯಬೇಕಿದೆ. ಕನ್ನಡಿಗರ ಅಸ್ಮಿತೆಗಾಗಿ ಈ ಪಕ್ಷ ಉಳಿಯಬೇಕಿದೆ. ಆ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಬ್ಬ ಯುವಕನಾಗಿ ನಿಖಿಲ್ ಕುಮಾರಸ್ವಾಮಿ ನಿಮ್ಮ ಜೊತೆಯಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ ಎಂದರು. ಇದನ್ನೂ ಓದಿ: ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು – ಸಿ.ಟಿ ರವಿ ಕಿಡಿ
ಅನಿರೀಕ್ಷಿತವಾದ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂತು. ಈ ಚುನಾವಣೆಯ ಸೋಲಿನ ಬಗ್ಗೆ ಹೆಚ್ಚಾಗಿ ಪರಾಮರ್ಶೆ ಮಾಡಲ್ಲ. ಕರ್ನಾಟಕ ರಾಜ್ಯದಲ್ಲಿ ಕಟ್ಟಿರುವ ರೈತ ಪರವಾದ ಪಕ್ಷ, ಪ್ರಾದೇಶಿಕ ಪಕ್ಷ ಜೆಡಿಎಸ್. ಲಕ್ಷಾಂತರ ಕಾರ್ಯಕರ್ತರ ದುಡಿಮೆ, ಎಲ್ಲಾ ತಂದೆ, ತಾಯಿಯರ ಆಶೀರ್ವಾದ, ರೈತರ ಆಶೀರ್ವಾದ ಮಾಡಿ ಇಲ್ಲಿಯವರೆಗೆ ಬೆಳೆಸಿ, ಉಳಿಸಿದ್ದೀರಿ ಎಂದರು. ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ದವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ ಇಲ್ಲಿಯವರೆಗೂ ನಾನು, ಪಕ್ಷ ಸಂಕಷ್ಟದಲ್ಲಿತ್ತು. ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಹೇಳಿದರು.
ನಿಮ್ಮಲ್ಲರ ಆಶೀರ್ವಾದದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.