ಚಿಕ್ಕಬಳ್ಳಾಪುರ: ನೀರಿನ ಬವಣೆಯಿಂದ ಬಳಲಿ ಬೆಂಡಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಈಗಾಗಲೇ ಹರಿದು ಬಂದಿರುವ ಕೃಷ್ಣಾ ನದಿಯ 10 ಟಿಎಂಸಿ ನೀರು ತರುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಾಗೇಪಲ್ಲಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯ ನೀರು ಆಂಧ್ರದ ಅನಂತಪುರ ಜಿಲ್ಲೆಯವರೆಗೆ ಬಂದಿದೆ. ಅದನ್ನು ರಾಜ್ಯಗಳ ನಡುವೆ ಒಪ್ಪಂದ ಮಾಡಿಸಿ ಈ ಭಾಗಕ್ಕೆ 10 ಟಿಎಂಸಿ ನೀರು ತರುವ ಕಾರ್ಯ ಮಾಡುವುದಾಗಿ ತಿಳಿಸಿದರು.
Advertisement
ಅಭಿವೃದ್ಧಿ ಕಾರ್ಯಕ್ಕೆ ಕಲ್ಲು ಹಾಕಿ ತಡೆ ಒಡ್ಡುವ ಬಿಜೆಪಿಯವರು ರಾಕ್ಷಸರು, ಸುಳ್ಳು ಭರವಸೆಗಳನ್ನು ನೀಡುವುದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ ರಚಿಸಿ ಕೊಡಬೇಕು ಎಂದು ಟೀಕಿಸಿದರು. ನನಗೆ ಎಂದೂ ಜಾತಿ ಮುಖ್ಯವಾಗಿಲ್ಲ. ನಾನು ಸಿಎಂ ಆಗಿದ್ದಾಗ ಹಲವಾರು ಜಾತಿಗಳಿಗೆ ಮೀಸಲಾತಿ ನೀಡಿದ್ದು, ವಾಲ್ಮೀಕಿ ಜನಾಂಗವನ್ನು ಎಸ್‍ಟಿ ಗೆ ಸೇರಿಸಿದ್ದು ನಾನು. ಕುರುಬರಿಗೂ ಕೂಡ ಮೀಸಲಾತಿ ನೀಡಲಾಗಿದೆ ಎಂದ ತಿಳಿಸಿದರು.
Advertisement
Advertisement
ನರೇಂದ್ರ ಮೋದಿ ಐದು ವರ್ಷಗಳಲ್ಲಿ ರೈತರಿಗೆ ಏನು ಮಾಡದೆ ಚುನಾವಣೆ ಹೊಸ್ತಿಲಲ್ಲಿ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ಹಾಕುವುದಾಗಿ ಸುಳ್ಳು ಭರವಸೆ ನೀಡಿದರು. ಆದರೆ ಈವರೆಗೆ ಯಾವ ರೈತನ ಖಾತೆಗೂ ಮೊದಲ ಕಂತಿನ ಹಣ ತಲುಪಿಲ್ಲ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಘೋಷಿಸಿರುವ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72 ಸಾವಿರವನ್ನು ನೀಡಲು ಘೋಷಣೆ ಮಾಡಿದ್ದು, ಇಪ್ಪತ್ತೈದು ಕೋಟಿ ಬಡವರಿಗೆ ಈ ಯೋಜನೆ ತಲುಪಲಿದೆ ಎಂದು ವಿವರಿಸಿದರು.
Advertisement
ಪ್ರಚಾರ ದಲ್ಲಿ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಮಕ್ಕಳಿಗೆ ಶೂ ಭಾಗ್ಯ ಮುಂತಾದ ಹಲವಾರು ಭಾಗ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದೆ. ಈ ಕಾರ್ಯಗಳನ್ನು ಬಿಜೆಪಿ ಮಾಡಲು ಸಾಧ್ಯವಿಲ್ಲ ಎಂದರು.