ಬೆಂಗಳೂರು: ಚುನಾವಣೆ ನಡೆಯುವ ಮೊದಲೇ ಕರ್ನಾಟಕದಲ್ಲಿ ಮೂರು ಪಕ್ಷದ ನಾಯಕರು ಮಾತ್ರ 2018ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದು ಹೇಳಿ ಚಾಮುಂಡಿ ಮಾತೆಯ ಜಪ ಮಾಡಲು ಮುಂದಾಗಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಮುಂದಿನ ದಸರೆಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದರೆ, ಸಿಎಂ ಸಿದ್ದರಾಮಯ್ಯ ಶನಿವಾರ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿ ಮುಂದಿನ ಬಾರಿಯೂ ನಾನೇ ಚಾಲನೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಿ ನಾನು ಆಯ್ಕೆ ಆಗುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
Advertisement
ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅಂತ ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ಜಾತಿ ಜಾತಿಯನ್ನು ಎತ್ತಿಕಟ್ಟಿ ಈಗ ಮತ್ತೆ ಅಧಿಕಾರಕ್ಕೆ ಬರಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದಾರೆ. ಜನರಿಗೆ ಹಣವನ್ನ ಹಂಚಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಜನರು ಅಷ್ಟು ದಡ್ಡರಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.
Advertisement
ಮುಂಬೈನಲ್ಲೇ ಹೃದಯಾಘಾತವಾಗಿತ್ತು: ಇಸ್ರೇಲ್‍ಗೆ ಹೋಗುವಾಗಲೇ ಮುಂಬೈನಲ್ಲಿ ಹೃದಯಾಘಾತವಾಗಿತ್ತು. ಒಂದು ಹೆಜ್ಜೆ ಇಡಲಿಕ್ಕೂ ಆಗದ ಸ್ಥಿತಿ ಇತ್ತು. 2007ರಲ್ಲೇ ಸಿಎಂ ಆಗಿದ್ದಾಗಲೇ ಆಪರೇಷನ್‍ಗೆ ಒಳಗಾಗಬೇಕಿತ್ತು. ಆದರೆ ಜನರ ಕೆಲಸ ಮಾಡಬೇಕು ಅನ್ನೋ ಉದ್ದೇಶಕ್ಕಾಗಿ ಮುಂದಕ್ಕೆ ಹಾಕಿದ್ದೆ. ನಾನು ಇಸ್ರೇಲ್ ತಲುಪುತ್ತೆನಾ ಎನ್ನುವ ಅನ್ನೋ ಭಯ ಇತ್ತು. ಕಾರಿನಿಂದ ಇಳಿಯಲು ಕೂಡ ಆಗಲಿಲ್ಲ. ಆ ಎಂಟು ಗಂಟೆ ವಿಮಾನ ಪ್ರಯಾಣ ಹೇಳೋಕೆ ನನ್ನಿಂದ ಸಾಧ್ಯವಿಲ್ಲ. ಇಸ್ರೇಲ್ ವೈದ್ಯರು ಅಲ್ಲೇ ಅಡ್ಮಿಟ್ ಆಗಲು ಹೇಳಿದ್ದರು. ಆದ್ರೆ ನಾನು ಅಡ್ಮಿಟ್ ಆಗಲಿಲ್ಲ, ಮಾತ್ರೆ ಕೊಡುವಂತೆ ಮನವಿ ಮಾಡಿದ್ದೆ. ಮತ್ತೆ ಜೆರುಸಲೆಂ ನಲ್ಲಿ ವಾಲ್ವ್ ಹೋಗಿರೋದು ಗೊತ್ತಾಯ್ತು. ಅಲ್ಲಿಂದ ಬಂದು ಅಮೆರಿಕ, ಆಸ್ಟ್ರೇಲಿಯ, ಲಂಡನ್ ವೈದ್ಯರು ಚರ್ಚೆ ಮಾಡಿದರು. ಆ ಮೇಲೆ ಡಾ. ಸತ್ಯ ಕೀ ಅಂಡ್ ಟೀಂ ಆಪರೇಷನ್ ಮಾಡಿದರು ಎಂದು ಕುಮಾರಸ್ವಾಮಿ ತಿಳಿಸಿದರು.
Advertisement
ನಾನು ವೈದ್ಯರ ಮೇಲೆ ಭಾರ ಹಾಕಿದ್ದೆ, ಹೊರ ದೇಶಕ್ಕೆ ಶಸ್ತ್ರಚಿಕಿತ್ಸೆಗೆ ಹೋಗೋದು ಬೇಡವೆಂದು ಹೇಳಿದೆ. ನನಗೆ ಅವತ್ತು ಆಪರೇಷನ್ ಮುಗಿದಾಗ 2, 3 ಗಂಟೆ ಆಗಿತ್ತು. ಆ ದಿನ ಆಸ್ಪತ್ರೆಯ ವೈದ್ಯರು ನಿದ್ದೆ ಮಾಡಲೇ ಇಲ್ಲ. ನನಗೆ ಹುಟ್ಟಿದಿಂದಲೇ ಹೃದಯ ಸಮಸ್ಯೆ ಇತ್ತು. ನಾನು ಸಿಎಂ ಆಗಿದ್ದಾಗ ಹೃದಯ ಸಮಸ್ಯೆ ಗೊತ್ತಾಯ್ತು ಎಂದು ತಿಳಿಸಿದರು.
Advertisement
ಉತ್ತೇಜನ ನೀಡಬೇಕು: ನಾಡಿನ ಪ್ರತಿಯೊಬ್ಬ ಪ್ರಜೆಗೂ ನನಗೆ ಸಿಕ್ಕ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಬೆಂಗಳೂರಿನಲ್ಲಿ ಜಯದೇವ ಬಿಟ್ಟರೆ ಅಪೋಲೋ ಉತ್ತಮವಾಗಿದೆ. ಡಾ.ಸತ್ಯಕೀ ಅಂಥವರಿಗೆ ಸರ್ಕಾರ ಉತ್ತೇಜನ ಕೊಡಬೇಕು. ಆರೋಗ್ಯ ಸಚಿವರು ಬಹಳ ಬುದ್ಧಿವಂತರು ಅಂದುಕೊಂಡಿದ್ದೆ, ಆದರೆ ಅಂಥ ಕೆಟ್ಟ ಸಚಿವರನ್ನು ನೋಡಲಿಲ್ಲ. ವೈದ್ಯರನ್ನು ಜೈಲಿಗೆ ಕಳುಹಿಸೋಕೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಜನ ಕ್ಷಮಿಸಬೇಕು ಅಲ್ಲಿ ಮನೆ ಮಾಡಿದ್ದೆ. ಆದರೆ ಒಂದು ತಿಂಗಳಲ್ಲಿ ಇವೆಲ್ಲಾ ಬಂದವು. ನವೆಂಬರ್ ತಿಂಗಳಿಂದ 50 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ದಿನಕ್ಕೆ ಎಂಟು ಗಂಟೆ ಕೆಮ್ಮಿದ್ದೇನೆ ಅದರಿಂದ ಹೊರ ಬಂದಿದ್ದೇನೆಂದು ಹೇಳಿದರು.
ಕಾಲ ಉತ್ತರ ನೀಡುತ್ತೆ: ಕುಮಾರಸ್ವಾಮಿಯವರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಆದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡೋದಕ್ಕೆ ಆಗಲ್ಲ. ದೇವೇಗೌಡರಿಗೆ 85 ವರ್ಷ ವಯಸ್ಸು ಆಗಿದೆ ಅವರು ಪ್ರವಾಸ ಮಾಡೋದಕ್ಕೆ ಆಗಲ್ಲ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ನಾಯಕರು ತಿಳಿದುಕೊಂಡಿದ್ದಾರೆ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಪ್ರಾದೇಶಿಕ ಪಕ್ಷವನ್ನು ಅಷ್ಟೊಂದು ಸುಲಭವಾಗಿ ತಿಳಿದುಕೊಳ್ಳಬೇಡಿ. ಕಾಲ ಎಲ್ಲದ್ದಕ್ಕೂ ಉತ್ತರ ನೀಡುತ್ತದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅದರ ಮೇಲೆ ಸಿಎಂ ಸಿದ್ದರಾಮಯ್ಯ ಗಮನ ಕೊಡಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರ್ಯಾಲಿಗೆ ಟಾಂಗ್: ಬಿಜೆಪಿಯವರು ನವೆಂಬರ್ 2 ರಂದು ಅಮಿತ್ ಶಾ ಮೂಲಕ ಪರಿವರ್ತನಾ ರ್ಯಾಲಿ ಮಾಡಲು ಹೊರಟಿದ್ದಾರೆ. ಈ ಹಿಂದೆ ಅವರು ಮಾಡಿದ್ದ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಬಿಜೆಪಿಯವರು ಈಗ ಮುಂದಾಗಿದ್ದಾರೆಂದು ಟಾಂಗ್ ನೀಡಿದರು.
ನನ್ನ ವೈಯಕ್ತಿಕ ವಿಚಾರಗಳಿಂದ ಹಿಂದೆ ನಾನು ದಾರಿ ತಪ್ಪಿದ್ದೆ, ಈಗ ಸರಿ ಮಾಡಿಕೊಳ್ಳುತ್ತೇನೆಂದು ಹೇಳಿದ ಎಚ್‍ಡಿಕೆ ಕಾರ್ಯಕರ್ತರು, ಅಭಿಮಾನಿಗಳು ಮುಂದಿನ 25 ದಿನ ನನ್ನ ಭೇಟಿಗೆ ಬರದಂತೆ ಮನವಿ ಮಾಡಿಕೊಂಡರು. ನನಗೆ 2ನೇ ಬಾರಿ ಜನ್ಮ ಕೊಟ್ಟವರು ವೈದ್ಯರು. ಶೀಘ್ರ ಚೇತರಿಕೆಯಾಗಲಿ ಅಂತಾ ಹಾರೈಸಿದ ಎಲ್ಲಾ ನನ್ನ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಮಾಧ್ಯಮದವರಿಗೂ, ಚರ್ಚ್, ಮಸೀದಿ, ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಎಚ್‍ಡಿಕೆ ಸಲ್ಲಿಸಿದರು.
ಡಾ.ಸತ್ಯ ಕೀ ಮಾತನಾಡಿ, ಕುಮಾರಸ್ವಾಮಿ ಅವರು ಶೇ.90 ರಷ್ಟು ಗುಣ ಮುಖರಾಗಿದ್ದಾರೆ. ಅವರು ಬಯಸಿದಾಗ ನಾವು ಡಿಸ್ಜಾರ್ಜ್ ಮಾಡುತ್ತೇವೆ. ಬಹುತೇಕ ನಾಳೆ ಡಿಸ್ಚಾರ್ಜ್ ಆಗಬಹುದು. ನಾವು ಕಳುಹಿಸಿಕೊಡಲು ಸಿದ್ಧರಿದ್ದೇವೆ. ಆದರೆ ಅವರನ್ನು ಯಾರೂ ಭೇಟಿ ಮಾಡದಂತೆ ನೋಡಿಕೊಳ್ಳಬೇಕು. ಈಗ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸ್ತಾರೋ ಮುಂದೆ ಅಷ್ಟು ಚೆನ್ನಾಗಿ ಇರುತ್ತಾರೆ ಎಂದು ತಿಳಿಸಿದರು.