ತಿರುವನಂತಪುರ: ಭಾರೀ ವಿವಾದಕ್ಕೀಡಾಗಿ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ಲವ್ ಜಿಹಾದ್ ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಯುವತಿ ಇದೀಗ ಮತ್ತೊಂದು ಹೊಸ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.
ಯುವತಿ ಅಖಿಲಾ ಅಶೋಕನ್ ಅಥವಾ ಹಾದಿಯಾ ಆಗಸ್ಟ್ 17ರಂದು ಈ ರೀತಿ ಮನವಿ ಮಾಡಿಕೊಂಡಾಗ ಹೋರಾಟಗಾರ ರಾಹುಲ್ ಈಶ್ವರ್ ವಿಡಿಯೋ ಮಾಡಿದ್ದು, ಗುರುವಾರ ಬಹಿರಂಗವಾಗಿದೆ.
ವಿಡಿಯೋದಲ್ಲೇನಿದೆ?: `ನಾನು ನಾಳೆ ಅಥವಾ ನಾಳಿದ್ದು ಹೀಗೆ ಯಾವುದೇ ಸಮಯದಲ್ಲಿ ಇಲ್ಲಿ ಕೊಲೆಯಾಗಬಹುದು ಅನ್ನೋ ನಂಬಿಕೆ ನನ್ನಲ್ಲಿದೆ. ನನಗೆ ಗೊತ್ತು ತಂದೆಗೆ ನನ್ನ ಮೇಲೆ ವಿಪರೀತ ಸಿಟ್ಟಿದೆ. ನಾನು ನಡೆದುಕೊಂಡು ಹೋಗುವಾಗ ಅವರು ಹೊಡೆಯುತ್ತಾರೆ. ಹಾಗೆಯೇ ಒದೆಯುತ್ತಾರೆ. ಇದರಿಂದ ತಲೆ ಅಥವಾ ನನ್ನ ದೇಹದ ಯಾವುದೇ ಭಾಗಕ್ಕಾಗಾದ್ರೂ ಗಂಭೀರ ಗಾಯಗಳಾಗಿ ಸಾಯುತ್ತೇನೆ. ಹೀಗಾಗಿ ನನ್ನನ್ನು ಇಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿ ಅಂತ ವಿಡಿಯೋದಲ್ಲಿ ಆಕೆ ಮನವಿ ಮಾಡಿದ್ದಾಳೆ.
24 ವರ್ಷದ ಹೋಮಿಯೋಪತಿ ವೈದ್ಯೆ ಅಖಿಲ ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡು ಮುಸ್ಲಿಂ ಯುವಕ ಶಫಿನ್ ಜಹಾನ್ ಎಂಬಾತನ ಜತೆ 2016ರಲ್ಲಿ ವಿವಾಹವಾಗಿದ್ದಳು. ಕೇರಳದ ಮಲಪ್ಪುರಂ ಜಿಲ್ಲೆಯಿಂದ ಹಾದಿಯಾಳನ್ನು ಅಪಹರಿಸಿ, ಆಕೆಯ ಗೆಳೆಯರು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಅಂತ ಹಾದಿಯಾ ತಂದೆ ಆರೋಪಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಇದೊಂದು ಲವ್ ಜಿಹಾದ್ ಎಂದು ಬಣ್ಣಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸರಿಗೆ ಆದೇಶ ನೀಡಿತ್ತು. ಅಲ್ಲದೇ ಯುವಕ ಶಫಿನ್ ಜಾಹನ್ ಗೆ ಉಗ್ರರೊಂದಿಗೆ ಸಂಪರ್ಕವಿರುವುದನ್ನು ಕೋರ್ಟ್ ಒಪ್ಪಿಕೊಂಡಿತ್ತು. ಕೇರಳದ ಹಿಂದೂ ಯುವತಿಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ಯುವಕನ ಜತೆ ವಿವಾಹವಾದ ಪ್ರಕರಣದ ಬಗ್ಗೆ ಎನ್‍ಐಎ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಪ್ರಕರಣದ ವಿಚಾರವನ್ನು ಈ ವರ್ಷದ ಆರಂಭದಲ್ಲಿ ಕೈಗೆತ್ತಿಕೊಂಡ ಹೈ ಕೋರ್ಟ್ ವಯಸ್ಕರ ಒಪ್ಪಿಗೆ ಇಲ್ಲದೇ ಈ ಮದುವೆ ನಡೆಯಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿತ್ತು.
ಯುವತಿ ಹಾದಿಯಾ ಈ ಮೊದಲು ಒಂದು ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ `ಮತಾಂತರಗೊಂಡ ಪ್ರಕರಣ ಬೆಳಕಿಗೆ ಬಳದ ಬಳಿಕ ನನ್ನ ಮನೆಯವರು ನನ್ನ ಕೂಡಿ ಹಾಕಿದ್ದು. ಎಲ್ಲೂ ಹೊರ ಹೊಗುವಂತಿಲ್ಲ. ಅಲ್ಲದೇ ನನ್ನ ಮನೆಯ ಹೊರಗಡೆ ಪೋಲೀಸ್ ಅಧಿಕಾರಿಗಳು ಕೂಡ ಕಾವಲು ಕಾಯುತ್ತಿದ್ದಾರೆ. ಇಲ್ಲಿ ಹೇಗೆ ಜೀವನ ಮಾಡಲು ಸಾಧ್ಯ? ಇದು ನನ್ನ ಜೀವನಾನಾ? ಅಂತ ತನ್ನ ಅಲವತ್ತುಕೊಂಡಿದ್ದಳು.