ಬೆಂಗಳೂರು: ಕಳ್ಳನ ಥರ ಓಡಿಹೋಗಲ್ಲ. ನಾನು ಏನೂ ಮಾಡಿಲ್ಲ. ನನ್ನ ಮನೆಯಲ್ಲಿ ಸಿಕ್ಕ ದುಡ್ಡಿಗೆ ಲೆಕ್ಕ ಕೊಟ್ಟಿದ್ದೇನೆ. ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕ ದುಡ್ಡಿಗೆ ಅವರು ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದಿಂದ ಬಂಧನದ ಭೀತಿಯಲ್ಲಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಬೆಳಗ್ಗೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ನನಗೆ ಯಾವುದೇ ಇಲಾಖೆಯಿಂದ ನೋಟಿಸ್ ಬಂದಿಲ್ಲ. ವಿದೇಶಕ್ಕೂ ಯಾವುದೇ ಹಣ ವರ್ಗಾವಣೆ ಮಾಡಿಲ್ಲ. ವಿದೇಶದಲ್ಲಿ ಯಾವುದೇ ಆಸ್ತಿಯೂ ಇಲ್ಲ. ಅಲ್ಲಿಂದ ನನಗೆ ಯಾವುದೇ ಹಣವೂ ಬಂದಿಲ್ಲ. ನನಗೆ ದೆಹಲಿಯಲ್ಲಿ 2 ನಿವಾಸ ಇರುವುದು ನಿಜ. ಅಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕ ದುಡ್ಡಿಗೆ ಅವರು ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಇನ್ನು ಈ ಕುರಿತು ಯಾವುದೇ ನೋಟಿಸ್ ಬಂದರು ಕಾನೂನು ಮೂಲಕ ಎದುರಿಸುತ್ತೇನೆ. ಹೈಕಮಾಂಡ್‍ಗೂ ಈ ಕುರಿತು ಸ್ಪಷ್ಟಮನವರಿಕೆಯಾಗಿದೆ. ಪಕ್ಷ ನೀಡುವ ಜವಾಬ್ದಾರಿಯನ್ನು ಈಗಲು ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಹಣ್ಣು ಕೆಂಪಗೆ ಇದ್ದರೆ ಜನ ಮರಕ್ಕೆ ಕಲ್ಲು ಹೊಡೆಯೋದು ಸಹಜ. ಚೆನ್ನಾಗಿದ್ದವರು ಬೀದಿಯಲ್ಲಿ ಹೋಗುತ್ತಿದ್ದಾರೆ ಜನ ನೋಡುತ್ತಾರೆ. ನಮ್ಮನ್ನೆಲ್ಲಾ ನೋಡೋಕೆ ದೇವರೊಬ್ಬ ಇದ್ದಾನೆ. 40 ವರ್ಷಗಳ ಜೀವನದಲ್ಲಿ ಸಾಕಷ್ಟು ಪೆಟ್ಟು ತಿಂದಿದ್ದೇನೆ. ಕಲ್ಲು ಪೆಟ್ಟು ತಿಂದರೆ ಮಾತ್ರ ವಿಗ್ರಹವಾಗಲು ಸಾಧ್ಯ. ನಾನು ಹೆದರುವ ಮಾತೇ ಇಲ್ಲ. ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ, 29 ವಯಸ್ಸಿಗೆ ಬೆಂಗಳೂರಿಗೆ ರಾಜಕೀಯ ಮಾಡಲು ಆಗಮಿಸಿದ್ದಾಗಿ ಗುಡುಗಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ ಎಂಬ ಸಹೋದರ ಡಿಕೆ ಸುರೇಶ್ ಆರೋಪವನ್ನು ಸಮರ್ಥಿಸಿಕೊಂಡರು. ಪುಟ್ಟಸ್ವಾಮಿ ಗೌಡರ ಲೆಟರ್‍ಗೆ ಯಡಿಯೂರಪ್ಪ ಕವರ್ ಹಾಕಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡಿದ್ದಾರೆ, ಇನ್ನು ಒಡ್ಡುತ್ತಿದ್ದಾರೆ. ಆದರೆ 104 ಸಂಖ್ಯೆಗೂ 118ಕ್ಕೂ ತುಂಬಾ ವ್ಯತ್ಯಾಸ ಇದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv