DistrictsKarnatakaLatestUdupi

ಡಿಸಿ ಕೊಲೆ ಯತ್ನ ಪ್ರಕರಣ: ದೈಹಿಕವಾಗಿ ಉಡುಪಿಯಲ್ಲಿರಲಿಲ್ಲ, ಮಾನಸಿಕವಾಗಿದ್ದು ಮಾಹಿತಿ ಪಡ್ದಿದ್ದೀನಿ- ಪ್ರಮೋದ್ ಮಧ್ವರಾಜ್

ಉಡುಪಿ: ಮರಳು ಮಾಫಿಯಾದಿಂದ ಉಡುಪಿ ಜಿಲ್ಲಾಧಿಕಾರಿ, ಎಸಿ ಸೇರಿದಂತೆ 7 ಮಂದಿಯ ಕೊಲೆಯತ್ನ ಪ್ರಕರಣ ನಡೆದು ಆರು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ಜಿಲ್ಲೆಗೆ ಆಗಮಿಸಿದ್ರು.

ರಾಷ್ಟ್ರಮಟ್ಟದಲ್ಲಿ ಪ್ರಕರಣ ಸದ್ದು ಮಾಡಿದ್ದರೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಸಚಿವರು ಉಡುಪಿ ಜಿಲ್ಲೆಯ ಕಡೆ ತಲೆಯೇ ಹಾಕಿರಲಿಲ್ಲ. ಇಂದು ಉಡುಪಿಗೆ ಬಂದು ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದರು.

ನಾನು ದೈಹಿಕವಾಗಿ ಉಡುಪಿಯಲ್ಲಿ ಇರಲಿಲ್ಲ. ಮಾನಸಿಕವಾಗಿ ಇಲ್ಲೇ ಇದ್ದು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ. ನಾನಿಲ್ಲಿ ಬಂದು ಮಾಡುವಂತದ್ದೇನೂ ಇಲ್ಲ. ಮುಂದೆಯೂ ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯೋದಿಲ್ಲ. ಸಭೆ ಕರೆದು ಚರ್ಚೆ ಮಾಡಿದ್ರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆ. ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪ ಬರುತ್ತದೆ. ಹೀಗಾಗಿ ಸಭೆ ಕರೆಯುವುದಿಲ್ಲ ಎಂದು ಘಟನೆ ಸಂಬಂಧ ಸಭೆ ನಡೆಸದ ಬಗ್ಗೆ ಸ್ಪಷ್ಟನೆ ನೀಡಿದರು.

ಮರಳು ಮಾಫಿಯಾ ವಿರುದ್ಧ ಜಿಲ್ಲಾಧಿಕಾರಿ, ಎಸಿ ಮತ್ತು ಎಸ್‍ಪಿ ಅವರಿಗೆ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ. ಅಕ್ರಮ ಮತ್ತು ಕಾನೂನು ಚಟುವಟಿಕೆಗಳಿಗೆ ನನ್ನ ಬೆಂಬಲವಿಲ್ಲ. ವಿರೋಧ ಪಕ್ಷಗಳಿಗೆ ಎರಡು ನಾಲಗೆ ಬಾಯಿಗೆ ಬಂದಂತೆ ಟೀಕೆ ಮಾಡುತ್ತದೆ ಎಂದು ಹರಿಹಾಯ್ದರು. ಈ ಹಿಂದೆ ಅಕ್ರಮ ಮರಳುಗಾರಿಕೆ ನಡೆದಾಗ ನಾನೇ ಎಸಿಯವರಿಗೆ ಮತ್ತು ಗ್ರಾಮ ಪಂಚಾಯತ್‍ನ ವಿಎ ಗೆ ಫೋನ್ ಮಾಡಿ ದೂರು ನೀಡಿದ್ದೆ. ಅನಧಿಕೃತ ಮರಳುಗಾರಿಕೆ ನಡೆಯುತ್ತಿದ್ದಾಗ ಡಿಸಿಗೂ ದೂರು ನೀಡಿದ್ದೆ. ನನ್ನ ಆಪ್ತರು ಮರಳುಗಾರಿಕೆ ಮಾಡಿದ್ದಾಗಲೂ ಎಸಿಯವರಿಗೆ ದೂರು ನೀಡಿದ್ದೇನೆ. ಮಾಧ್ಯಮದವರು ಇದನ್ನು ಕ್ರಾಸ್ ಚೆಕ್ ಮಾಡ್ಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಾರ್ಯ ತತ್ಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ದಂಡಾಧಿಕಾರಿಯಾಗಿ ಜಿಲ್ಲೆಯ ಬಗೆಗಿನ ಬದ್ಧತೆಯ ಬಗ್ಗೆ ಇರುವ ಕಾಳಜಿ ಬಗ್ಗೆ ನನಗೆ ಸಂತಸವಾಗಿದೆ. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಅಕ್ರಮ ವಿರುದ್ಧದ ಕಾರ್ಯಾಚರಣೆ ಮುಂದುವರೆಸಲು ಹೇಳಿದ್ದೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

 

Leave a Reply

Your email address will not be published. Required fields are marked *

Back to top button