ನಾನು ಸತ್ಯನಾರಾಯಣ (Satyanarayan Puja) ದೇವರ ಪ್ರಸಾದದಿಂದ (Prasada) ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ ಎಂದು ಬಿ ಸರೋಜಾದೇವಿ(87) ಹೇಳಿದ್ದರು.
ಹೌದು. ಬಹುಭಾಷಾ ನಟಿಯಾಗಿರುವ ಸರೋಜಾದೇವಿ (B Saroja Devi ) ಅವರು ಇಂದು ವಿಧಿವಶರಾಗಿದ್ದಾರೆ. 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಇವರು ಕನ್ನಡ ಚಿತ್ರರಂಗದಲ್ಲಿ ʼಅಭಿನಯ ಸರಸ್ವತಿʼ ಎಂದೇ ಹೆಸರು ಪಡೆದಿದ್ದರು.
ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ:1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್
ಸರೋಜಾದೇವಿ ಹೇಳಿದ್ದೇನು?
ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು.
ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು. ಇದನ್ನೂ ಓದಿ: ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿಯೆಂದು ಹೇಳ್ಕೊತಾರೆ, ಇವ್ರು ಇದನ್ನೆಲ್ಲ ಮಾಡ್ಲೇ ಇಲ್ಲ – ರಾಜೇಂದ್ರ ಸಿಂಗ್ ಬಾಬು
ಮೊದಲ ಮೂರು ಹೆಣ್ಣು ಮಕ್ಕಳೇ ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ ಎಂದು ಹೇಳಿದ್ದರು.
ಬಹಳ ದೈವ ಭಕ್ತೆಯಾಗಿದ್ದ ಸರೋಜಾದೇವಿ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದು ಪೇಪರ್ ಓದುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಇಂದು ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆಯ ವೇಳೆಗೆ ಟಿವಿ ಆನ್ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು. ಅರೆಪ್ರಜ್ಞಾವಸ್ಥೆ ಸ್ಥಿತಿಗೆ ಹೋದ ಕೂಡಲೇ ಅವರನ್ನು ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.