– ನನ್ನ-ಸಿದ್ರಾಮಯ್ಯನವರ ನಡುವೆ ಯಾವತ್ತೂ ಭಿನ್ನ ಇಲ್ಲ
– ಪಾರ್ಟಿ ಪ್ರೆಸಿಡೆಂಟ್ ಅಂದ್ರೆ ಫಾದರ್ ಇದ್ದಂಗೆ ಎಂದ ಡಿಸಿಎಂ
ಬೆಂಗಳೂರು: ನನ್ನಲ್ಲಿ ಸಿದ್ದರಾಮಯ್ಯನವರಲ್ಲಿ (Siddaramaiah) ಯಾವತ್ತೂ ಭಿನ್ನಾಭಿಪ್ರಾಯ ಇಲ್ಲ. ನಾನಂತೂ ಗುಂಪು ಮಾಡೋಕೆ ಯಾವತ್ತೂ ಹೋಗಲ್ಲ ಎಂದು ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಒಗ್ಗಟ್ಟಿನ ಮಂತ್ರ ಜಪಿಸಿದರು.
ನಾನು ಡೆಲ್ಲಿಗೆ ಹೋಗಿದ್ದೆ, ಆದ್ರೆ ಒಬ್ಬ ಶಾಸಕರನ್ನೂ ನನ್ನ ಜೊತೆ ಕರ್ಕೊಂಡು ಹೋಗಿಲ್ಲ. ಕರಕೊಂಡು ಹೋಗಬಹುದಾಗಿತ್ತು ಅದೇನು ದೊಡ್ಡ ಕೆಲಸ ಅಲ್ಲ. ಆದರೆ ಕರ್ಕೊಂಡು ಹೋಗಲಿಲ್ಲ. ನಾನು ಎಂಟು ಹತ್ತು ಜನರನ್ನ ಹಾಕೊಂಡು ಹೋಗಬಹುದು ಅದರಿಂದ ಏನೂ ಪ್ರಯೋಜನ ಆಗಲ್ಲ ಎಂದು ಹೇಳಿದರು.
ನಾನು ಒಂದು ಸ್ಥಾನದಲ್ಲಿ ಇರೋನು, ಪಾರ್ಟಿ ಪ್ರೆಸಿಡೆಂಟ್ ಅಂದ್ರೆ ಫಾದರ್ ಇದ್ದಂಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. 140 ಜನರನ್ನ ತೆಗೆದುಕೊಂಡು ಹೋಗುವವನು ನಾನು. ನನ್ನ ಅವರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ನನಗೆ, ನನ್ನ ಆತ್ಮ ಸಾಕ್ಷಿಗೆ ಗೊತ್ತು, ದೇವರಿಗೆ ಮಾತ್ರ ಗೊತ್ತು ಎಂದು ತಿಳಿಸಿದರು.
ಕುಮಾರಸ್ವಾಮಿ (HD Kumaraswamy) ಸರ್ಕಾರ ಇದ್ದಾಗಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ, ಕುಮಾರಸ್ವಾಮಿ ಒಪ್ಪದೆ ಇರಬಹುದು. ಆದ್ರೆ ಕುಮಾರಸ್ವಾಮಿ ಅವರಿಗೂ ಲಾಯಲ್ ಆಗಿ ಇದ್ದೆ. ಸರ್ಕಾರ ಉಳಿಸಬೇಕು ಎಂದು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಅನ್ನೋದು ಅವರ ತಂದೆಗೂ ಗೊತ್ತು. ಈಗ ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ, ಅದಕ್ಕೆ ನನಗೆ ಬೇಸರ ಇಲ್ಲ. ನನ್ನ ಬದುಕು ಆ ರೀತಿಯಾಗಿದೆ. ಆದ್ರೆ ನಾನು ಯಾವತ್ತೂ ಬ್ಯಾಕ್ ಸ್ಟಾಬ್ ಮಾಡೋನು ಅಲ್ಲಾ ಏನೇ ಇದ್ದರೂ ನೇರಾನೇರ ಫೈಟ್ ಮಾಡೋನು ಎಂದು ವಿರೀಧಿಗಳಿಗೆ ತಿರುಗೇಟು ನೀಡಿದರು.


