ಬೆಂಗಳೂರು: ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ವರ್ತನೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಬೇಸರಗೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿ ರಾತ್ರಿ 11.45ರ ವರೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ ನಡೆದಿತ್ತು. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಜೊತೆ ಮಾತನಾಡುವಂತೆ ಹೇಳಿದ್ದಾರೆ. ಆದರೆ ಮೊದಲೇ ಸಿಟ್ಟಾಗಿದ್ದ ಸಿದ್ದರಾಮಯ್ಯ ಅವರು ನೋಡ್ರಪ್ಪ.. ನಾನೇ ರಾಜೀನಾಮೆ ಕೊಟ್ಟು ಬಿಡ್ತೀನಿ ಎಂದು ಹೇಳಿದ್ದಾರೆ.
Advertisement
ಸಿದ್ದರಾಮಯ್ಯನವರು ಯಾವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಸಾಂದರ್ಭಿಕವಾಗಿ ಸಿಟ್ಟು ಹೊರ ಹಾಕುವಾಗ ಈಗ ನಡೆಯುತ್ತಿರುವ ಹೈಡ್ರಾಮಗಳನ್ನು ನೋಡಿ ಈ ಮಾತನ್ನು ಆಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ನಿನ್ನೆ ರಾತ್ರಿ 11.30ರ ಸುಮಾರಿಗೆ ಸದನದಲ್ಲಿ ಸಾಕಷ್ಟು ಗದ್ದಲ ನಡೆದಿತ್ತು. ಈ ವೇಳೆ ಆರ್ ವಿ ದೇಶ್‍ಪಾಂಡೆ ಮಧ್ಯಪ್ರವೇಶಿಸಿ ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಅವರು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಲ್ಲಿ ನೀವು ಮಾತಾಡಿ, ನೀವು ಮನವಿ ಮಾಡಿದ್ರೆ ಸರಿ ಹೋಗಬಹುದೆಂದು ಹೇಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಸಿಎಂ ಅವರು ರಾಜೀನಾಮೆ ಕೊಟ್ಟು ಹೋಗಲಿ. ಇಲ್ಲವೆಂದಲ್ಲಿ ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ.
Advertisement
ಸಂದೇಶ ರವಾನೆ: ಇವತ್ತೇ ವಿಶ್ವಾಸಮತ ಸಾಬೀತು ಪಡಿಸೋಣ. ಒಂದು ವೇಳೆ ಇಂದು ವಿಶ್ವಾಸಮತ ಸಾಬೀತು ಮುಂದೂಡಿಕೆಯಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಸಿದ್ದರಾಮಯ್ಯ ಸಿಎಂಗೆ ಈಗಾಗಲೇ ರವಾನಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಡಿಸಿಎಂ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಮೂಲಕ ಸಿಎಂಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸುಪ್ರೀಂ ನಮ್ಮ ಪರವಾಗಿ ಆದೇಶ ನೀಡಿದರೆ ಅದಕ್ಕೆ ನನ್ನದೇನು ತಕರಾರಿಲ್ಲ. ಆದರೆ ಕೋರ್ಟ್ ಆದೇಶ ನಮ್ಮ ಪರವಾಗಿ ಬಾರದೇ ಸುಮ್ಮನೆ ನಾಳೆಗೆ ವಿಶ್ವಾಸಮತ ಸಾಬೀತು ಮಾಡುವುದಕ್ಕೆ ದಿನ ದೂಡಲು ಮುಂದಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಇಷ್ಟರಲ್ಲೇ ನಾವು ಬಹುಮತ ಸಾಬೀತು ಪಡಿಸಬೇಕಿತ್ತು. ಆದರೆ ಸಿಎಂ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ನಾನು ಸೋಮವಾರ ಬಹುಮತ ಸಾಬೀತು ಮಾಡುತ್ತೇನೆ ಎಂದು ಶುಕ್ರವಾರವೇ ಸದನದಲ್ಲಿ ಸ್ಪಷ್ಟವಾಗಿ ಹೇಳಿದ್ದೆ. ಸಿಎಂ ಒಪ್ಪಿಗೆ ಮೇರೆಗೆ ನಾನು ಸದನದಲ್ಲಿ ಈ ಮಾತನ್ನು ಆಡಿದ್ದೆ. ಸ್ವತಃ ಕುಮಾರಸ್ವಾಮಿಯವರೇ ಸೋಮವಾರ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಸಿಎಂ ಉಲ್ಟಾ ಹೊಡೆದು ಬಿಟ್ಟಿದ್ದರೆ. ರಾತ್ರಿಯಿಡೀ ಚರ್ಚೆ ನಡೆದರೂ ಮತ್ತೆ ಮುಂದೂಡಿಕೆಯಾಗಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮೈತ್ರಿ ಅನಿವಾರ್ಯತೆಗೆ ನಿನ್ನೆ ಸ್ಪೀಕರ್ ಮನವೊಲಿಕೆಗೂ ಮುಂದಾಗಿದ್ದೆ. ಆದರೆ ಶುಕ್ರವಾರ ನಾನು ನುಡಿದ ಮಾತಿನಂತೆ ನಡೆಯದೇ ತಪ್ಪು ಮಾಡಿದ್ದೇನೆ. ಈ ಮೂಲಕ ಸಿಎಂ ಜೊತೆಗೆ ನನ್ನ ಮೇಲೂ ವಚನಭ್ರಷ್ಟ ಆರೋಪ ಕೇಳಿ ಬಂದಿದೆ ಎಂದು ಆಪ್ತರ ಬಳಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ನಾನೇ ಸದನಕ್ಕೆ ಮಾತುಕೊಟ್ಟಿದ್ದೇನೆ. ಇಂದು ಈ ಮಾತಿನಂತೆ ನಡೆಯದೇ ಇದ್ದರೆ ನಾನು ತಲೆ ಅಡಿ ಹಾಕಬೇಕಾಗುತ್ತದೆ. ಯಾವ ಕಾರಣಕ್ಕೂ ಇವತ್ತು ಮಾತು ತಪ್ಪಬಾರದು. ಬಹುಮತ ಸಾಬೀತಿಗೆ ಮುಂದಾಗಲೇಬೇಕು ಎಂದು ಖಡಕ್ಕಾಗಿ ಸಿದ್ದರಾಮಯ್ಯ ಹೇಳಿದ್ದಾರೆ.