ಮಡಿಕೇರಿ: ಐದು ಬಾರಿ ಶಾಸಕನಾಗಿ ಗೆದ್ದಿರುವ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೆದ್ದು ಬರುವ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡ್ತೇವೆ ಎಂದು ಪಕ್ಷ ಹೇಳಿದೆ. ಹೀಗಾಗಿ ಅವರಿಗೆ ಕೊಟ್ಟು ಉಳಿದ ಸ್ಥಾನಗಳಲ್ಲಿ ನನಗೂ ಸಚಿವ ಸ್ಥಾನ ಬೇಕು ಎಂದು ಶಾಸಕರು ತಿಳಿಸಿದರು. ಇದನ್ನೂ ಓದಿ: ಸಚಿವ ಸ್ಥಾನ ಕೊಟ್ರೆ ನಿಭಾಯಿಸುವೆ: ಶಾಸಕ ಕೆ.ಜಿ ಬೋಪಯ್ಯ
ಈ ಹಿಂದೆಯೂ ನನಗೆ ಸಚಿವ ಸ್ಥಾನ ಕೈತಪ್ಪಿದೆ. ಈಗಲಾದರೂ ಸಿಗುತ್ತೇ ಅನ್ನೋ ನಿರೀಕ್ಷೆಯಲ್ಲಿದ್ದೇನೆ. ಎಲ್ಲವೂ ಹೈಕಮಾಂಡ್‍ಗೆ ಬಿಟ್ಟ ವಿಷಯ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
ಇದೇ ವೇಳೆ ಟಿಪ್ಪು ವಿಷಯವನ್ನು ಪಠ್ಯದಲ್ಲಿ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ವಿಷಯ ಪಠ್ಯದಲ್ಲಿ ಉಳಿಸಿಕೊಳ್ಳುವುದಾದರೆ ಆತನ ಕ್ರೌರ್ಯವನ್ನೂ ಉಳಿಸಿಕೊಳ್ಳಬೇಕು. ಅದನ್ನು ಬಿಟ್ಟು ಟಿಪ್ಪುವನ್ನು ಇಂದ್ರ, ಚಂದ್ರ ಎಂದು ಹೊಗಳುವುದು ಬೇಡ. ಪಠ್ಯಪುಸ್ತಕ ತಜ್ಞರ ಸಮಿತಿ ನೀಡಿರುವ ವರದಿಯನ್ನು ನನಗೂ ಕೊಡಬೇಕು. ಆದರೆ ಇದುವರೆಗೆ ನನಗೆ ವರದಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಇನ್ನೂ ಎರಡು ಮೂರು ದಿನಗಳಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು.