ನಟ ಶಿವರಾಜ್ ಕುಮಾರ್ ವಿರುದ್ಧ ನಿನ್ನೆಯಷ್ಟೇ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಪುನೀತ್ ರಾಜ್ ಕುಮಾರ್ ಹೆಸರನ್ನೂ ಅವರು ಎಳೆತಂದಿದ್ದರು. ಈ ನಡೆ ಡಾ.ರಾಜ್ ಕುಟುಂಬದ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಸ್ವತಃ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಇದೀಗ ಪ್ರತಾಪ್ ಸಿಂಹ ಮಾತು ಬದಲಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಹ, ‘ನನಗೆ ಡಾ.ರಾಜ್ ಕುಮಾರ್ ಕುಟುಂಬದ ಬಗ್ಗೆ ಗೌರವವಿದೆ. ನಾನೂ ಕೂಡ ಶಿವರಾಜ್ ಕುಮಾರ್ ಅಭಿಮಾನಿ. ಅವರ ಕುಟುಂಬವನ್ನು ನಾವು ರಾಜಕೀಯ ಹೊರತಾಗಿ ನೋಡುತ್ತೇವೆ. ಶಿವಣ್ಣ ಕೂಡ ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಧನ್ಯವಾದಗಳನ್ನು ಹೇಳುತ್ತೇನೆ’ ಎಂದಿದ್ದಾರೆ.
ಇದೇ ವಿಷಯವಾಗಿ ಶಿವರಾಜ್ ಕುಮಾರ್ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದರು. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ್ದರು. ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದರು. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ
ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು.
ಕಳೆದ ಮೂರು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.