ಉಡುಪಿ: ಮೊನ್ನೆ ಮೊನ್ನೆಯವರೆಗೂ ಜನಸೇವೆ ಮಾಡಿದ ಶ್ರೀಗಳು ಶ್ರೀಕೃಷ್ಣನ ಪಾದ ಸೇರಿದ್ದಾರೆ. ಅಯೋಧ್ಯೆಯ ತೀರ್ಪಿಗಾಗಿ ಶ್ರೀಗಳು ಕಾಯುತ್ತಿದ್ದರು ಅನಿಸುತ್ತೆ. ಶ್ರೀಗಳ ಚಿಂತನೆ, ವಿಚಾರ ಸದಾ ಜೀವಂತ ಎಂದು ಕೇಂದ್ರ ಸಚಿವ ಸದಾನಂದ ಗೌಡರು ಸಂತಾಪ ಸೂಚಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದರು. ಪೇಜಾವರ ಶ್ರೀಗಳು ಶತಮಾನ ಕಂಡಂತಹ ಅದ್ಭುತ ಧಾರ್ಮಿಕ ಗುರುಗಳು ಇವತ್ತು ನಮ್ಮನೆಲ್ಲಾ ಅಗಲಿದ್ದಾರೆ. ಶ್ರೀಕೃಷ್ಣನ ಪಾದ ಸೇರಿದ್ದಾರೆ. ಅವರ ಬಗ್ಗೆ ಹೇಗೆ ಮತನಾಡಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ಶ್ರೀಗಳು ಸಾಮಾಜಿಕ ಕಳಕಳಿ ಜೊತೆಗೆ ಧಾರ್ಮಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಮೊನ್ನೆ ಮೊನ್ನೆಯವರೆಗೂ ಕೂಡ ಈ ಇಳಿ ವಯಸ್ಸಿನಲ್ಲೂ ಶ್ರೀಗಳು ಅದ್ಭುತ ಜನಸೇವೆ ಮಾಡಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಬಹುಶಃ ಶ್ರೀಗಳು ಅಯೋಧ್ಯೆ ತೀರ್ಪಿಗಾಗಿ ಕಾಯುತ್ತಿದ್ದರು ಅನಿಸುತ್ತೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು ಎನ್ನುವುದಕ್ಕೆ ನಿರಂತರವಾಗಿ ತಮ್ಮ ಸೌಹಾರ್ದತಾ ಮನೋಭಾವದಿಂದ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನ ಶ್ರೀಗಳು ಮಾಡಿದ್ದರು ಎಂದು ಸದಾನಂದ ಗೌಡರು ಪೇಜಾವರ ಶ್ರೀಗಳ ಸೇವೆಯನ್ನು ನೆನೆದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ
Advertisement
Advertisement
ಅಸ್ಪೃಶ್ಯತೆ ಜಗತ್ತಿಗಿರುವ ಅತ್ಯಂತ ದೊಡ್ಡ ಶಾಪ. ಅದರಲ್ಲೂ ನಮ್ಮ ದೇಶದಲ್ಲಿ ಹೆಚ್ಚು. ಪೇಜಾವರ ಶ್ರೀಗಳು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಪಠಾಧೀಶರು, ಅವರು ಹರಿಜನ ಕೇರಿಗಳಿಗೆ ಹೋಗಿ ಕ್ರಾಂತಿ ಮಾಡಿದವರು. ಅವರ ಚಿಂತನೆ, ವಿಚಾರ ಸದಾ ಜೀವಂತ ಎಂದರು. ಶ್ರೀಗಳನ್ನು ಹೆಲಿಕಾಪ್ಟರ್ ಮೂಲಕ ಅಜ್ಜರಜಾಡಿನಿಂದ ಶಿಫ್ಟ್ ಮಾಡಲಾಗುತ್ತೆ. ಬೆಂಗಳೂರಿನಲ್ಲೂ ಕೂಡ ಶ್ರೀಗಳ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.