ಬೆಂಗಳೂರು: ಚಂದನವನದ ನಟ, ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯದ ದಾಖಲೆ ಹಾಗೂ 25.3 ಕೆಜಿ ಚಿನ್ನಾಭರಣ, 2.85 ಕೋಟಿ ರೂ. ನಗದು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸಿನಿಮಾ ಕ್ಷೇತ್ರ ವಿವಿಧ ನಟ, ನಿರ್ಮಾಪಕರ ಮೇಲೆ ನಡೆದ ಈ ದಾಳಿಯಲ್ಲಿ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ 180 ಅಧಿಕಾರಿಗಳು ಭಾಗವಹಿಸಿದ್ದು, 21 ಕಡೆ ದಾಳಿ ಮಾಡಿ ಇದರಲ್ಲಿ 5 ಸ್ಥಳಗಳಲ್ಲಿ ಹುಡುಕಾಟವನ್ನು ನಡೆಸಲಾಗಿದೆ.
Advertisement
Advertisement
ದಾಳಿ ನಡೆಸಲು ಇಲಾಖೆ ಕಳೆದ 3 ತಿಂಗಳಿನಿಂದ ಕೂಡ ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ಗುರುತಿಸಲಾದ ವ್ಯಕ್ತಿಗಳು ಹಾಗೂ ಸ್ಥಳಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಸಿನಿಮಾ ನಿಮಾರ್ಪಕರು, ನಟರು, ಸಿನಿಮಾ ಸಂಸ್ಥೆಗಳು ಕೂಡ ಸೇರಿದೆ. ದಾಳಿಯ ವೇಳೆ ಆಘೋಷಿತ ಆಸ್ತಿ, ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಲಭ್ಯವಾಗಿದೆ. ಪ್ರಮುಖವಾಗಿ ಸಿನಿಮಾ ರಂಗದಲ್ಲಿ ಚಿತ್ರಮಂದಿರದಿಂದ ಬರುವ ಆದಾಯವನ್ನು ಬೇರೆಡೆ ವರ್ಗಾವಣೆ ಮಾಡಿ ಹೂಡಿಕೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಬಹು ದೊಡ್ಡ ಆರ್ಥಿಕ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
Advertisement
ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ರೈಟ್ಸ್, ಚಿತ್ರ ಮಂದಿರದ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿದಂತೆ ಇತರೇ ಮೂಲಗಳಿಂದ ಗಳಿಸಿದ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
Advertisement
ಸಿನಿಮಾದಿಂದ ಪಡೆದ ಆದಾಯದೊಂದಿಗೆ ಬೇರೆ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸ್ಪಷ್ಟವಾಗಿದ್ದು, ಈ ಮೂಲಗಳಿಂದ ಬಂದ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಒಟ್ಟು ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಐಟಿ ಇಲಾಖೆ ತಿಳಿಸಿದೆ. ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಪ್ರವೇಶ ಪಡೆದರೆ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ತೆರಿಗೆ ವಂಚನೆ ಮಾಡಲು ಹಣ ವರ್ಗಾವಣೆ ಮಾಡಿರುವುದು ಸಾಬೀತಾದರೆ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಐಟಿ ಕಾಯ್ದೆ 278 (ಡಿ) ಅಡಿ ಪ್ರಕರಣ ದಾಖಲಿಸಲು ಐಟಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಕಳೆದ 3 ದಿನಗಳಿಂದ ನಡೆದ ದಾಳಿಯ ವೇಳೆ ಪತ್ತೆಯಾದ ಆಸ್ತಿ, ಹಣ, ಆದಾಯದ ಒಟ್ಟು ಮಾಹಿತಿಯನ್ನು ಮಾತ್ರ ಐಟಿ ಅಧಿಕಾರಿಗಳು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಹಣ ಲಭಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಬೇಕಿದೆ. ಸದ್ಯ ಐಟಿ ಇಲಾಖೆ ವಶಕ್ಕೆ ಪಡೆದಿರುವ ಆದಾಯ ಹಾಗೂ ಹಣದ ಬಗ್ಗೆ ನಾಳೆಯಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಟ ಹಾಗೂ ನಿರ್ಮಾಪಕರು ಐಟಿ ಇಲಾಖೆಗೆ ಆಗಮಿಸಿ ಸೂಕ್ತ ದಾಖಲೆ ಹಾಗೂ ಸ್ಪಷ್ಟನೆ ನೀಡಲು ಅವಕಾಶ ಇದೆ. ಜನವರಿ 3 ರಂದು ನಡೆದ ಐಟಿ ದಾಳಿಯಲ್ಲಿ ನಾಲ್ವರು ನಿರ್ಮಾಪಕರು ಹಾಗೂ ನಾಲ್ವರು ಸ್ಟಾರ್ ನಟರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv