ಮಂಡ್ಯ: ಈ ಹಿಂದೆ ನಾನು ಸಾಂದರ್ಭಿಕ ಶಿಶು ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮೃತ್ಯು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲ್‍ಗೆ ಹೋಗಿದ್ದಾಗಲೇ ನಾನು ಸಾಯಬೇಕಿತ್ತು, ದೇವರ ಆಶೀರ್ವಾದದಿಂದ ನಾನು ಬದುಕಿ ಬಂದಿದ್ದೇನೆ. ಆದರೆ ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಬಹಿರಂಗ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮಳವಳ್ಳಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾವುಕರಾದ ಅವರು, ನಾನು ಈ ಹಿಂದೆಯೇ ಸಾಯಬೇಕಿತ್ತು. ಆದರೆ ದೇವರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಬದುಕಿರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.
Advertisement
Advertisement
ಕುಮಾರಸ್ವಾಮಿ ತಮ್ಮ ಸಾವಿನ ಬಗ್ಗೆ ಮಾತನಾಡುವುದಕ್ಕೆ ಕಾರಣ ಸಭೆಯಲ್ಲಿ ಆದ ಎರಡು ಘಟನೆಗಳು ಕಾರಣ ಎನ್ನಲಾಗಿದೆ. ಆರಂಭದಲ್ಲಿ ಓರ್ವ ಮಹಿಳೆ ಬಹಿರಂಗ ಸಭೆಯಲ್ಲೇ ಸಿಎಂ ಬಳಿ ತಾನು ಕೈ ಸಾಲ ಮಾಡಿಕೊಂಡಿದ್ದು, ಇದರಿಂದಾಗಿ ನನಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು. ಇದಾದ ನಂತರ ಮಳವಳ್ಳಿ ತಾಲೂಕಿನ ಕುಲುಮೆದೊಡ್ಡಿ ಗ್ರಾಮದ ಕರಿಯಪ್ಪ ಹಾಗೂ ಚಿಕ್ಕತಾಯಮ್ಮಳ ಮಗಳಾದ ಪವಿತ್ರ ಕಾಲಿನ ಸಮಸ್ಯೆಯನ್ನು ಸಿಎಂ ಬಳಿ ಹೇಳಿಕೊಂಡರು. ಇದರಿಂದ ಬೇಸರಗೊಂಡ ಅವರು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಇದೇ ವೇಳೆ ಸಾಲಮನ್ನಾ ಕುರಿತು ಮಾತನಾಡಿದ ಅವರು, ಐದು ತಿಂಗಳಾದರೂ ದುಡ್ಡು ಕೊಟ್ಟಿಲ್ಲ ಅನ್ನುವ ಭಯ ನಿಮಗೇಕೆ? ಇದು ದೇವರ ಕೊಟ್ಟ ಸರ್ಕಾರ. ಮಂಡ್ಯ ಜಿಲ್ಲೆ ಜನರನ್ನು ಕೊನೆಯ ಉಸಿರಿರುವವರೆಗೂ ನಾನು ಮರೆಯಲ್ಲ. ಮಂಡ್ಯ ಹೆಸರನ್ನು ಹೇಳಿದರೆ, ಬಿಜೆಪಿಯವರು ಮಂಡ್ಯ ಬಜೆಟ್, ಮಂಡ್ಯಕ್ಕೆ ಮತ ಕೇಳಲು ಬಂದಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಏನು ಗೊತ್ತು? ನನ್ನ ಹೃದಯದಲ್ಲಿ ನಾನು ಯಾವ ರೀತಿಯ ನೋವು ಇದೆ ಅನ್ನೋದನ್ನ ಅರ್ಥ ಮಾಡಿಕೊಂಡಿಲ್ಲ. ನನಗೆ ನನ್ನ ಪ್ರಾಣಕ್ಕಿಂತಲೂ ನಾಡಿನ ಜನರ ಹಿತ ಮುಖ್ಯ. ರೈತರ ಸಾಲಮನ್ನಾಗೆ ನಾನು ಅಭಿವೃದ್ಧಿಗೆ ಇಟ್ಟಿರುವ ಹಣವನ್ನು ಬಳಸಿಕೊಳ್ಳುವುದಿಲ್ಲ. ಖಾಸಗಿ ಸಾಲಮನ್ನಾ ಮಾಡಲು ಋಣ ಭಾರ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಮುಂದಿನ 15 ದಿನಗಳಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕುವ ವಿಶ್ವಾಸ ಇದೆ ತಿಳಿಸಿದರು.
Advertisement
ಭಾಷಣದ ವೇಳೆ ಹತ್ತಿರದ ಮಸೀದಿಯಿಂದ ಆಜಾನ್ ಕೇಳುತ್ತಿದ್ದಂತೆ ಮಾತು ನಿಲ್ಲಿಸಿದ ಸಿಎಂ ನಂತರ ಮುಂದುವರಿಸಿ, ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ರಾಜ್ಯವನ್ನು ಕತ್ತಲೆಗೆ ದೂಡುತ್ತಿದ್ದಾರೆ ಎಂದು ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ. ನನ್ನ ನಾಡಿನ ಜನರನ್ನು ಕತ್ತಲೆಗೆ ದೂಡುವಷ್ಟು ದುಷ್ಟನೇ? ದ್ರೋಹಿನಾ ಎಂದು ಪ್ರಶ್ನಿಸಿ, ನನ್ನ ಜನತೆಗೆ ದ್ರೋಹ ಮಾಡಿದ ದಿನ ನಾನು ಬದುಕಿದ್ದು ಸತ್ತಂತೆ. ನನ್ನನ್ನು ತುಳಿಯುವುದರಿಂದ ನಿಮಗೇನು ಲಾಭವಿದೆ? ಲಾಭವಿದ್ದರೇ ತುಳಿಯಿರಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=E06SX7qYKF8