ಪುನೀತ್ ರಾಜಕುಮಾರ್ (Puneeth Rajkumar) ಗಾಗಿ ಸಿನಿಮಾವೊಂದನ್ನು ನಿರ್ದೇಶನ (Direction) ಮಾಡುವ ಕನಸು ಕಂಡಿದ್ದರಂತೆ ನಟ ಉಪೇಂದ್ರ (Upendra). ಈ ವಿಷಯವನ್ನು ಹಲವಾರು ಬಾರಿ ಅಪ್ಪು ಜೊತೆ ಅವರು ಮಾತನಾಡಿದ್ದರಂತೆ. ನಟನೆ, ಸಿನಿಮಾ ನಿರ್ದೇಶನ ಹೀಗೆ ತಮ್ಮಲ್ಲಿ ತಾವು ಕಳೆದು ಹೋಗಿದ್ದ ಉಪೇಂದ್ರರಿಗೆ ಕೊನೆಗೂ ಅಪ್ಪುಗಾಗಿ ಸಿನಿಮಾ ಮಾಡಲಿಲ್ಲವಂತೆ. ಇಂಥದ್ದೊಂದು ನೋವಿನ ಸಂಗತಿಯನ್ನು ಉಪ್ಪಿ ಹಂಚಿಕೊಂಡಿದ್ದಾರೆ.
ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಕಬ್ಜ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ‘ಆದಷ್ಟು ಬೇಗ ಶಿವಣ್ಣನ (Shivraj Kumar) ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಇಡೇರಲಿಲ್ಲ. ಕಬ್ಜ ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ ಕಬ್ಜ ಮಾಡಲಿದ್ದಾರೆ’ ಎಂದರು.
ಪಕ್ಕದಲ್ಲಿಯೇ ಇದ್ದ ಶಿವರಾಜ್ ಕುಮಾರ್ ಅವರತ್ತ ನೋಡಿ ಉಪೇಂದ್ರ, ‘ಶಿವಣ್ಣ ಓಂ ಸಿನಿಮಾ ಪಾರ್ಟ್ 2 ಮಾಡೋಣವಾ?’ ಎಂದರು. ಉಪ್ಪಿ ಮಾತು ಕೇಳಿದ ಶಿವಣ್ಣ ಉತ್ಸಾಹದಿಂದಲೇ ‘ಆಗಲಿ’ ಎಂದು ಒಪ್ಪಿಗೆ ಸೂಚಿಸಿದರು. ‘ಈಗಾಗಲೇ ನಿರ್ಮಾಪಕರು ರೆಡಿ ಇದ್ದಾರೆ. ನಿರ್ದೇಶಕ ಆಗಿ ನಾನಿದ್ದೇನೆ. ನೀವು ಯಾವಾಗ ಡೇಟ್ ಕೊಡ್ತೀರೋ ಅವತ್ತಿನಿಂದ ಹೊಸ ಸಿನಿಮಾ ಶುರು ಮಾಡೋಣ’ ಎಂದು ಎಲ್ಲರ ಸಂಭ್ರಮಕ್ಕೆ ಕಾರಣರಾದರು ಉಪೇಂದ್ರ.
ಉಪೇಂದ್ರರ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ‘ನಾನು ಉಪೇಂದ್ರ ಅಭಿಮಾನಿ. ಅವರು ಓಂ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ‘ಓಂ’ ಸಿನಿಮಾ ಡೈಲಾಗ್ ಹೇಳಿದರು.