ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

Public TV
3 Min Read
FotoJet 51

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ದೈಹಿಕವಾಗಿ ಅಗಲಿ ಇಂದಿಗೆ ಒಂದು ವರ್ಷ. ವಿಜಯ್ ಅವರ ಆತ್ಮೀಯ ಸ್ನೇಹಿತರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೂ ಆದ ಮಂಸೋರೆ ಅವರು, ವಿಜಯ್ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಕೊನೆ ದಿನವನ್ನೂ ನೆನಪಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4, ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು.  ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ ಬೆಸೆದುಕೊಂಡಿರುತ್ತದೆ. ಆದರೆ ನನಗೆ ರಾಷ್ಟ್ರೀಯ ಹೆದ್ದಾರಿ 4 ಹೆಚ್ಚು ಮುಖ್ಯವಾದದ್ದು, ಹರಿವು ಸಿನೆಮಾದ ಕಾರಣಕ್ಕೆ.

FotoJet 4 9

ಹರಿವು-ಮೊದಲ ನಿರ್ದೇಶನದ ಸಿನೆಮಾ, ಮೊದಲ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನೆಮಾ, ನಾನಾ ಕೆಲಸಗಳನ್ನು ಮಾಡಿಕೊಂಡಿದ್ದ ನನಗೆ, ನಿರ್ದೇಶಕನಾಗಿ ಒಂದು ಗಟ್ಟಿಯಾದ ನೆಲೆ ಕೊಟ್ಟ ಸಿನೆಮಾ, ಅದೆಲ್ಲದಕ್ಕಿಂತ ಹೆಚ್ಚಾಗಿ ‘ಸಂಚಾರಿ ವಿಜಯ್’ ಎಂಬ ಆಪ್ತ ಗೆಳೆಯನನ್ನು ಕೊಟ್ಟ ಸಿನೆಮಾ. ಮುಖ್ಯ ಪಾತ್ರ ನಾಯಕನಾಗಿ ವಿಜಯ್ ಸರ್ ಮೊದಲ ಸಿನೆಮಾ ಹರಿವು, ಅದರ ಮೊದಲ ಶಾಟ್ 2012ರಲ್ಲಿ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4, ನಾನು ನಿರ್ದೇಶಕನಾಗಿ ಮೊದಲ ಬಾರಿಗೆ Action-Cut ಹೇಳಿದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

FotoJet 2 25

ಆ ಸಿನೆಮಾ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ. ‘ಹರಿವು’ ಸಿನೆಮಾದ ಮುಖ್ಯ ಕತೆ ಅನಾವರಣಗೊಳ್ಳುವುದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. 2012ರಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಆರಂಭಿಸಿದಾಗ ಮಾಡಿಕೊಂಡ ಅವಾಂತರಗಳು, ಕಲಿಸಿದ ಪಾಠಗಳು, ನಿರ್ದೇಶನದ ಕಡೆಗೆ ಇರಬೇಕಾದ ಬದ್ಧತೆಗಳನ್ನು ಕಲಿಸಿಕೊಟ್ಟದ್ದು ಇದೇ ರಾಷ್ಟ್ರೀಯ ಹೆದ್ದಾರಿ 4. ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಾನು ‘ಸಂಚಾರಿ ವಿಜಯ್’ ಸರ್ ಸಾಕಷ್ಟು ಬಾರಿ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ.  ಆದರೆ ಈ ರಾಷ್ಟ್ರೀಯ ಹೆದ್ದಾರಿ 4 ನನ್ನ ಪಾಲಿಗೆ ಶಾಶ್ವತವಾದ ದುಃಖದ ನೆನಪೊಂದನ್ನು ಉಳಿಸಿ ಬಿಡುತ್ತದೆ ಎಂದು ಯಾವತ್ತೂ ಯೋಚಿಸಿರಲಿಲ್ಲಾ.

FotoJet 3 14

ಎಷ್ಟೊ ಕನಸುಗಳು, ನಗು, ಜಗಳ, ನೆನಪುಗಳ ಮೂಲಕ ಸಂಚರಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ, ನನ್ನ ಗೆಳೆಯನ ಜೊತೆ ಅಂತಿಮ ಪ್ರಯಾಣ ಮಾಡುವ ದಿನ ಬಂದಿದ್ದು ನನ್ನ ಪಾಲಿನ ಬಹು ದೊಡ್ಡ ದುರಂತ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ, ಈ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆಪ್ತ ಗೆಳೆಯನನ್ನು Ambulance ಅಲ್ಲಿ ಮಲಗಿಸಿಕೊಂಡು, ಅವರ ಆಪ್ತವಾದ ಸಾಕಷ್ಟು ಕನಸುಗಳನ್ನು ಕಂಡಿದ್ದ ಅವರ ದುಡಿಮೆಯ ಗಳಿಕೆಯಿಂದ ಕೊಂಡುಕೊಂಡಿದ್ದ ಅವರ ತೋಟಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವಂತ ದಿನ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲಾ.. ಅಂತ ದುರಂತದ ದಿನಕ್ಕೆ ಇಂದಿಗೆ ಒಂದು ವರ್ಷ.

FotoJet 1 33

ವಿಜಯ್ ಸರ್ ನನಗೆ ಪರಿಚಯ ಆಗಿದ್ದು, ಮೊದಲ ಬಾರಿ ಮಾತನಾಡಿದ್ದು 13-06-2012  ಅವರು ನನ್ನೊಂದಿಗೆ ಮಾತು ನಿಲ್ಲಿಸಿ ಮೌನವಾಗಿದ್ದು 13-06-2021 . ಅಪ್ಪನ ಜೊತೆಯ ನೆನಪಿನ ಕೊನೆಯ ಪಯಣವೂ ಇದೇ ರೀತಿ ಆಂಬ್ಯುಲೆನ್ಸ್ ನಲ್ಲೇ ಸಾಗಿತ್ತು, ಅಷ್ಟೇ ಆಪ್ತನಾದ ಗೆಳೆಯನ ಜೊತೆಯ ಕೊನೆಯ ಪಯಣವೂ ಆಂಬ್ಯುಲೆನ್ಸಲ್ಲೇ ಸಾಗುವಂತಾಯಿತು. ಅದು ನಮ್ಮಿಬ್ಬರ ಪಾಲಿನ, ಜೀವನದಲ್ಲಿ ಮುಖ್ಯವಾದ ಹೆದ್ದಾರಿಯಲ್ಲಿ.  ಆ ಹೆದ್ದಾರಿಯಲ್ಲಿ ಒಂದೊಂದು ಹಂತದಲ್ಲೂ ಒಂದೊಂದು ನೆನಪುಗಳಿವೆ, ಪ್ರತೀ ಬಾರಿ ಹೋದಾಗಲೂ ಆ ನೆನಪುಗಳು ಕಾಡುತ್ತಲೇ ಇರುತ್ತವೆ, ಮಿಸ್ ಯೂ ‘ಸಂಚಾರಿ ವಿಜಯ್’ ಸರ್.

Share This Article
Leave a Comment

Leave a Reply

Your email address will not be published. Required fields are marked *