ಬೆಂಗಳೂರು: ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ ಎಂದು ನಿತ್ಯಾನಂದ ಸ್ವಾಮೀಜಿ ಭರ್ಜರಿ ಬಿಲ್ಡಪ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದಾನೆ.
ನಿತ್ಯಾನಂದ ಹೇಳಿದ್ದೇನು?
ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.
ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದಾನೆ.
ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.